ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಯಲಹಂಕದಲ್ಲಿ ಮರ್ಮಾಂಗ ಕತ್ತರಿಸಿ ವ್ಯಕ್ತಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾಗಿದ್ದ ಚಂದ್ರಶೇಖರ್ ಪತ್ನಿ ಶ್ವೇತಾ ಹಾಗೂ ಆಕೆಯ ಪ್ರಿಯತಮ ಸುರೇಶ್ ಬಂಧಿತ ಆರೋಪಿಗಳು.
ಪ್ರಕರಣದ ಹಿನ್ನೆಲೆ:ಕೊಲೆಯಾದ ಚಂದ್ರಶೇಖರ್ನೊಂದಿಗೆ ಶ್ವೇತಾ 4 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ, ಚಂದ್ರಶೇಖರ್ ವಯಸ್ಸಿನಲ್ಲಿ ಶ್ವೇತಾಗಿಂತ 16 ವರ್ಷ ದೊಡ್ಡವನಾಗಿದ್ದ. ಅಕ್ಕನ ಮಗಳು ಎಂಬ ಕಾರಣಕ್ಕೆ ಶ್ವೇತಾಳನ್ನು ಬಲವಂತವಾಗಿ ಮದುವೆ ಮಾಡಿ ಕೊಡಲಾಗಿತ್ತಂತೆ. ಮದುವೆಯಾದ ಮೇಲೆ ಶ್ವೇತಾ ಕಾಲೇಜು ಮೆಟ್ಟಿಲು ಹತ್ತಿದ್ದರು.
ಕಾಲೇಜಿನಲ್ಲಿ ಕೆಲ ಸ್ನೇಹಿತರ ಜೊತೆ ಶ್ವೇತಾ ನಿರಂತರ ಸಂಪರ್ಕದಲ್ಲಿದ್ದಳಂತೆ. ಇದೇ ವಿಷಯಕ್ಕೆ ದಂಪತಿ ನಡುವೆ ಆಗಾಗ ಗಲಾಟೆಯಾಗುತಿತ್ತು. ಹೀಗಾಗಿ ಕುಟುಂಬಸ್ಥರು ರಾಜಿ ಪಂಚಾಯಿತಿ ಮಾಡಿ ಆಂಧ್ರದ ಹಿಂದೂಪುರದಿಂದ ಬೆಂಗಳೂರಿಗೆ ವಾಸಿಸಲು ಕಳುಹಿಸಿದ್ದರು.
ನಾಲ್ಕು ತಿಂಗಳ ಹಿಂದೆ ಯಲಹಂಕದ ಕೊಂಡಪ್ಪ ಲೇಔಟ್ಗೆ ಬಂದು ವಾಸವಾಗಿದ್ದರು. ಆದರೆ, ಶ್ವೇತಾ ಮಾತ್ರ ಪರ ಪುರುಷರ ಸಂಪರ್ಕ ಬಿಟ್ಟಿರಲ್ಲಿಲ್ಲವಂತೆ. ಹಿಂದೂಪುರದ ಸುರೇಶ್ ಎಂಬಾತನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳಂತೆ. ಬೆಂಗಳೂರಿಗೆ ಬಂದರೂ ಸಹ ಸುರೇಶ್ ಶ್ವೇತಾ ಬೆನ್ನುಬಿದ್ದಿದ್ದನಂತೆ. ಆಗಾಗ ಬೆಂಗಳೂರಿಗೆ ಬಂದು ಶ್ವೇತಾ ಜೊತೆ ಸುರೇಶ್ ದೈಹಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ.
ಈ ವಿಷಯ ಶ್ವೇತಾ ಪತಿ ಚಂದ್ರಶೇಖರ್ಗೆ ಗೊತ್ತಾಗಿ ಮನೆಯಲ್ಲಿ ದೊಡ್ಡ ಜಗಳವಾಗಿತ್ತು. ಇದರಿಂದ ಕೋಪಗೊಂಡ ಶ್ವೇತಾ ತನ್ನ ಪ್ರಿಯಕರ ಸುರೇಶ್ಗೆ ಮನೆಯಲ್ಲಿ ಗಲಾಟೆಯಾಗಿದೆ ಎಂದಿದ್ದಳು. ಹೀಗಾಗಿ ಸುರೇಶ್ ನಿನ್ನ ಗಂಡ ಇದ್ದರೆ ನಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತದೆ. ಅವನನ್ನು ಮುಗಿಸಿ ನಾವು ನೆಮ್ಮದಿಯಾಗಿರೋಣ ಎಂದಿದ್ದನಂತೆ. ಇದಕ್ಕೆ ಶ್ವೇತಾ ಸಹ ಒಪ್ಪಿಗೆ ಕೊಟ್ಟು ಪ್ಲಾನ್ ಮಾಡು ಎಂದಿದ್ದಳು.
ಸುರೇಶ್ ಚಂದ್ರಶೇಖರ್ನನ್ನು ಮುಗಿಸಬೇಕು ಪಕ್ಕಾ ಪ್ಲಾನ್ ಮಾಡಿಕೊಂಡು ಕಳೆದ 22ರಂದು ಬೆಂಗಳೂರಿಗೆ ಬಂದಿದ್ದ. ಗಂಡ ಮನೆಯಲ್ಲಿದ್ದಾನೆ. ಇದೇ ಸರಿಯಾದ ಸಮಯ. ಅವನನ್ನು ಮುಗಿಸಿಬಿಡು ಎಂದು ಶ್ವೇತಾ ಸುರೇಶ್ಗೆ ಕರೆ ಮಾಡಿದ್ದಳು.
ಹೊಂಚು ಹಾಕಿ ಕೂತಿದ್ದ ಸುರೇಶ್ ನಿನ್ನ ಬಳಿ ಮಾತನಾಡಬೇಕು ಎಂದು ಚಂದ್ರಶೇಖರ್ನನ್ನು ಮನೆಯ ಟೆರೇಸ್ಗೆ ಕರೆದುಕೊಂಡು ಹೋಗಿ ಜಗಳ ತೆಗೆದಿದ್ದ. ಮಾತಿಗೆ ಮಾತು ಬೆಳೆದಾಗ ಸುರೇಶ್ ಪಕ್ಕದಲ್ಲಿದ್ದ ಕಟ್ಟಿಗೆಯಿಂದ ಚಂದ್ರಶೇಖರ್ ತಲೆಗೆ ಹೊಡೆದಿದ್ದಾನೆ. ಹೊಡೆತದ ರಭಸಕ್ಕೆ ಚಂದ್ರಶೇಖರ್ ತೀವ್ರ ರಕ್ತಸ್ರಾವದಿಂದ ನೆಲಕ್ಕೆ ಬಿದ್ದಿದ್ದಾನೆ. ಇದೇ ವೇಳೆ ಚಂದ್ರಶೇಖರ್ ಮರ್ಮಾಂಗ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ.
ಕೊಲೆ ನಡೆದಾಗ ಪತ್ನಿ ಶ್ವೇತಾ ಮನೆಯಲ್ಲಿದ್ದರೂ ಸಹ ಏನೂ ಗೊತ್ತಿಲ್ಲ ಎಂಬ ರೀತಿ ನಟಿಸಿದ್ದಳು. ಕುಟುಂಬಸ್ಥರು ಬಂದಾಗ ಗಂಡ ಮೃತಪಟ್ಟಿದ್ದಾನೆ ಎಂದು ಕಣ್ಣೀರು ಸುರಿಸಿ ನಾಟಕವಾಡಿದ್ದಳು. ಸದ್ಯ ಶ್ವೇತಾಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯವನ್ನು ಬಾಯ್ಬಿಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ ಮನೆಯ ಟೆರೆಸ್ ಮೇಲೆ ವ್ಯಕ್ತಿಯ ಮರ್ಮಾಂಗ ಕತ್ತರಿಸಿ ಕೊಲೆ.. ಹೆಂಡತಿ ಪೊಲೀಸ್ ವಶಕ್ಕೆ