ಬೆಂಗಳೂರು: ಪೆಟ್ರೋಲ್ ಬಂಕ್‍ನ ಪರವಾನಗಿ ಕೊಡಿಸುವುದಾಗಿ ನಂಬಿಸಿದ ಸೈಬರ್ ಖದೀಮರು ಅರ್ಜಿದಾರರಿಂದ ಸುಮಾರು 55.43 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ಜಯನಗರದ ನಿವೇದಿತಾ ಪಿ. ಕಬಾಡಿ ಎಂಬವರು ವಂಚನೆಗೊಳಗಾದ ಮಹಿಳೆ. ಈ ಸಂಬಂಧ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೆಟ್ರೋಲ್ ಬಂಕ್ ಪರವಾನಗಿ ಹೆಸರಲ್ಲಿ ವಂಚನೆ: ಬೆಂಗಳೂರಿನಲ್ಲಿ 55 ಲಕ್ಷ ಕಳೆದುಕೊಂಡ ಮಹಿಳೆ - Bengaluru Crime News
ಪೆಟ್ರೋಲ್ ಬಂಕ್‍ನ ಪರವಾನಗಿ ಹೆಸರಲ್ಲಿ ಸೈಬರ್ ಖದೀಮರು ಮಹಿಳೆಗೆ ವಂಚನೆ ಎಸಗಿದ್ದಾರೆ.
ಬಂಕ್ ತೆರೆಯುವ ಉದ್ದೇಶದಿಂದ ದೂರುದಾರರು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರೈ.ಲಿ. ವೆಬ್‍ಸೈಟ್ ಹುಡುಕಿ ಅದರಲ್ಲಿದ್ದ ಇ-ಮೇಲ್ ಐಡಿಗೆ ಅರ್ಜಿಯನ್ನು ಭರ್ತಿ ಮಾಡಿ ಅಪ್‍ಲೋಡ್ ಮಾಡಿದ್ದರು. ಕೆಲ ದಿನಗಳ ಬಳಿಕ ಅಪರಿಚಿತ ವ್ಯಕ್ತಿ, ನಿವೇದಿತಾ ಅವರಿಗೆ ಕರೆ ಮಾಡಿ ಪೆಟ್ರೋಲ್ ಬಂಕ್‍ಗೆ ಪರವಾನಗಿ ಕೊಡಿಸುತ್ತೇವೆ. ಅದಕ್ಕೆ ಶುಲ್ಕ ಪಾವತಿ ಮಾಡಬೇಕೆಂದು ಹೇಳಿದ್ದಾನೆ. ಅದಕ್ಕೆ ಒಪ್ಪಿದ ದೂರುದಾರರಿಂದ ಆರಂಭದಲ್ಲಿ ಕಡಿಮೆ ಹಣವನ್ನು ಆನ್‍ಲೈನ್‍ನಲ್ಲಿ ವರ್ಗಾವಣೆ ಮಾಡಿಸಿಕೊಂಡಿದ್ದಾನೆ.
ಅರ್ಜಿ ಸ್ವೀಕರಿಸಿ ಮುಂದಿನ ಹಂತಕ್ಕೆ ರವಾನೆ ಮಾಡಿರುವುದಾಗಿ ಹೇಳಿದ ವಂಚಕ, ಹಂತ- ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ 55.43 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ಮತ್ತೆ ಹಣಕ್ಕೆ ಬೇಡಿಕೆವೊಡ್ಡಿದ್ದಾನೆ. ಅನುಮಾನ ಬಂದು ಹಣ ವಾಪಸ್ ಕೇಳಿದಾಗ ಸಂಪರ್ಕ ಕಡಿತಗೊಳಿಸಿದ್ದಾನೆ. ಬಳಿಕ ದಿಕ್ಕು ತೋಚದ ದೂರುದಾರರು, ದಕ್ಷಿಣ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ನಿವೇದಿತಾ ನೀಡಿದ ದೂರಿನ ಮೇರೆಗೆ ತನಿಖೆ ಮುಂದುವರಿದಿದೆ.