ಆನೇಕಲ್ (ಬೆಂಗಳೂರು):ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದ ಅಂಚಿನಲ್ಲಿರುವ ಹಕ್ಕಿ ಪಿಕ್ಕಿ ಕಾಲೋನಿ ಬಳಿ ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲಿಯೇ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ. ಉದ್ಯಾನದ ಸಿಬ್ಬಂದಿ ಕುಮಾರ್ ಎಂಬವರ ತಾಯಿ ನಾಗಮ್ಮ (50) ಮೃತರು ಎಂದು ಗುರುತಿಸಲಾಗಿದೆ.
ಉದ್ಯಾನದಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಮಗನಿಗೆ ಇಳಿ ಕತ್ತಲಿನಲ್ಲಿ ಊಟ ಕೊಡಲು ಹೋಗುತ್ತಿದ್ದಾಗ ಆನೆ ದಾಳಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಬನ್ನೇರುಘಟ್ಟ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕತ್ತಲಾಗುತ್ತಿದ್ದಂತೆ ಜೈವಿಕ ಉದ್ಯಾನದ ಬಳಿ ಕಾಡಾನೆಗಳು ಓಡಾಡುವುದು ಸಹಜವಾಗಿದ್ದು, ಆನೆ-ಮಾನವ ಸಂಘರ್ಷ ಇತ್ತೀಚೆಗೆ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ಶ್ವಾನ ಸೈನಿಕ ತರಬೇತಿಯ ಸೈನಿಕ ಹೆಚ್.ಎನ್.ಸಿಂಗ್ (33) ಒಂಟಿ ಸಲಗನ ದಾಳಿಯಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕಾಡಾನೆ ದಾಳಿಗೆ ರೈತ ಬಲಿ:ಕೆಲವು ದಿನಗಳ ಹಿಂದೆ ನಡೆದ ಪ್ರಕರಣವೊಂದರಲ್ಲಿ ದನ ಮೇಯಿಸಲು ಕಾಡಿಗೆ ಹೋಗಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೊಳ್ಳೆಪುರ ದೊಡ್ಡಿ ಗ್ರಾಮದ ಬಳಿ ನಡೆದಿತ್ತು. ಸೊಳ್ಳೆಪುರ ದೊಡ್ಡಿ ನಿವಾಸಿ ಅಲಗಪ್ಪ ಮೃತಪಟ್ಟಿದ್ದರು. ದನಗಳನ್ನು ಮೇಯಿಸಲೆಂದು ಹಲಗಪ್ಪ ನಿತ್ಯ ಕಾಡಿಗೆ ಹೋಗುತ್ತಿದ್ದರು. ಎಂದಿನಂತೆ ಹೋಗಿದ್ದಾಗ ಆನೆ ದಾಳಿ ನಡೆಸಿದೆ ಕೊಂದು ಹಾಕಿತ್ತು.