ಬೆಂಗಳೂರು :ಅನೈತಿಕಸಂಬಂಧವನ್ನು ಕಡಿದುಕೊಳ್ಳಲು ಮುಂದಾದ ಪ್ರಿಯಕರನ ನಿರ್ಧಾರಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಲು ಮುಂದಾಗಿದ್ದ ಪ್ರೇಯಸಿಯನ್ನು ಪ್ರಿಯಕರನೇ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಸರಗುಣಂ (35) ಮೃತ ಮಹಿಳೆಯಾಗಿದ್ದು, ಈ ಸಂಬಂಧ ಗಣೇಶ್(22) ಎಂಬಾತನನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.
ಮೃತ ಸರಗುಣಂ ಈಗಾಗಲೇ ಮದುವೆಯಾಗಿದ್ದು 17 ವರ್ಷದ ಮಗನಿದ್ದಾನೆ. ಪತಿ ಕೂಲಿ ಕೆಲಸ ಮಾಡಿಕೊಂಡಿದ್ದು, ಈಕೆ ಮನೆಕೆಲಸ ಮಾಡಿಕೊಂಡಿದ್ದಳು. ಕಳೆದ ನಾಲ್ಕು ವರ್ಷದ ಹಿಂದೆ ಬಸವೇಶ್ವರ ನಗರ ಬಳಿಯ ಎಂಜಿ ನಗರದಲ್ಲಿ ವಾಸವಿದ್ದಾಗ ಸರಗುಣಗೆ ಆಟೋ ಚಾಲಕನಾಗಿದ್ದ ಗಣೇಶ್ ಎಂಬಾತನ ಪರಿಚಯವಾಗಿತ್ತು. ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಜೊತೆಗೆ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸರಗುಣ ತನ್ನ ಗಂಡನಿಗೆ ಗೊತ್ತಾಗದಂತೆ ಗಣೇಶನನ್ನು ಭೇಟಿ ಮಾಡುತ್ತಿದ್ದಳು. ಅಲ್ಲದೆ ಸರಗುಣ ಗಣೇಶನಿಗೆ 50 ಸಾವಿರ ರೂ. ಹಣ ನೀಡಿದ್ದಳು. ಜೊತೆಗೆ ಬಸವೇಶ್ವರ ನಗರದ ಜೆಸಿ ನಗರದಲ್ಲಿ ಒಂದು ಬಾಡಿಗೆ ಮನೆಯನ್ನೂ ಆತನಿಗೆ ವ್ಯವಸ್ಥೆ ಮಾಡಿದ್ದಳು. ಸರಗುಣ ಆಗಾಗ ಇಲ್ಲಿಗೆ ಬಂತು ಗಣೇಶನ ಜೊತೆ ಕಾಲ ಕಳೆಯುತ್ತಿದ್ದಳು. ಇತ್ತೀಚೆಗೆ ಗಣೇಶ್ಗೆ ಮತ್ತೋರ್ವಳ ಪರಿಚಯವಾಗಿದ್ದು, ಆಕೆಯ ಜೊತೆ ಸಂಬಂಧ ಹೊಂದಿದ್ದ. ಹೀಗಾಗಿ ಗಣೇಶ್ ಸರಗುಣಳಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.