ಬೆಂಗಳೂರು: ಪ್ರೀತಿಸಿದ ಮಹಿಳೆ ಬೇರೆಯವರೊಂದಿಗೆ ಸಲುಗೆ ಬೆಳೆಸಿಕೊಂಡಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕಾನ್‌ಸ್ಟೆಬಲ್‌ವೋರ್ವರನ್ನು ಹತ್ಯೆಗೈದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಂಜಯ್ ಸಾವನ್ನಪ್ಪಿದ ಪೊಲೀಸ್ ಸಿಬ್ಬಂದಿ.
ಮೊದಲು ಆಸ್ಪತ್ರೆಯಲ್ಲಿ ನಡೆದ ವಿಚಾರಣೆಯಲ್ಲಿ ಸಂಜಯ್ ಸ್ವಯಂಪ್ರೇರಿತವಾಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿರುವುದಾಗಿ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ. ಮತ್ತೊಂದೆಡೆ, ಮೃತನ ಸಂಬಂಧಿಕರು ಮಹಿಳೆಯೇ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಎರಡೂ ಕಡೆಯಿಂದಲೂ ಮಾಹಿತಿ ಸಂಗ್ರಹಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೂಲಂಕಶವಾಗಿ ತನಿಖೆ ನಡೆಸುತ್ತಿದ್ದಾರೆ.
2018 ಬ್ಯಾಚ್ನ ಸಂಜಯ್ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಮಹಿಳೆಯೊಂದಿಗೆ ಪರಿಚಯವಾಗಿದೆ. ಈ ಪರಿಚಯವು ಕ್ರಮೇಣ ಪ್ರೀತಿಗೆ ತಿರುಗಿತ್ತು. ಕೆಲ ತಿಂಗಳ ಬಳಿಕ ಹೋಮ್ ಗಾರ್ಡ್ ಕೆಲಸ ತೊರೆದು ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದರು. ವಿವಾಹಿತೆಯಾಗಿದ್ದ ಮಹಿಳೆಯನ್ನು ಆಗಾಗ ಸಂಜಯ್ ಭೇಟಿಯಾಗುತ್ತಿದ್ದರು. ಈ ಹಿಂದೆ ಇಬ್ಬರೂ ಏಕಾಂತದ ಕ್ಣಣಗಳನ್ನು ಕಳೆದಿದ್ದರು.
ಡಿ.6 ರಂದು ಇಬ್ಬರು ಜೊತೆಗಿರಬೇಕಾದರೆ ಮಹಿಳೆಗೆ ಅನಾಮಿಕ ಕರೆ ಬಂದಿದೆ. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಬೇರೆ ವ್ಯಕ್ತಿಯೊಂದಿಗೆ ಸಲುಗೆ ಬೆಳಸಿಕೊಂಡಿದ್ದೀಯಾ ಎಂದು ಆರೋಪಿಸಿ ಆಕೆಯ ಮೊಬೈಲ್ ಪರಿಶೀಲಿಸಿದಾಗ ವ್ಯಕ್ತಿಯೊಂದಿಗೆ ಮಾತನಾಡಿರುವುದು ರೆಕಾರ್ಡ್ ಆಗಿತ್ತು. ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವೆ ಎಂದು ಬೆದರಿಸಿದ್ದಳು. ಬಳಿಕ ಸಂಜಯ್, ಹೋಗಿ ಪೆಟ್ರೋಲ್ ತಂದು ಸುರಿದುಕೊಂಡು ಬೆಂಕಿ ಹಚ್ಚುವುದಾದರೆ ಹಚ್ಚು ಎಂದು ಸವಾಲು ಹಾಕಿದ್ದ. ಮಹಿಳೆ ಕೂಡಲೇ ಬೆಂಕಿ ಕಡ್ಡಿಗೀರಿ ಸುಟ್ಟಿದ್ದಾಳೆ ಎಂದು ಸಂಜಯ್ ದೂರಿನಲ್ಲಿ ಉಲ್ಲೇಖಿಸಿದ್ದರು.