ಬೆಂಗಳೂರು : ಇದು ಯಾವುದೇ ಕ್ತೈಂ ಥ್ರಿಲ್ಲರ್ ಸಿನಿಮಾಗೂ ಕಡಿಮೆ ಇಲ್ಲದಂತೆ ಪ್ಲ್ಯಾನ್ ಮಾಡಿ ವಂಚಿಸಿರುವ ಕಥೆಯಿದು. ವ್ಯವಸ್ಥಿತ ಸಂಚು ರೂಪಿಸಿ ಅಂದು ಕೊಂಡಂತೆ ಮಹಿಳೆಯೂ ಇನ್ಸೂರೆನ್ಸ್ ಕಂಪನಿಗೆ 3 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಸುಳ್ಳು ಮಾಹಿತಿ ನೀಡಿ ಇನ್ಯೂರೆನ್ಸ್ ಕಂಪನಿಯಿಂದ 3 ಕೋಟಿ ಹಣ ವಿಮೆ ಮಂಜೂರು ಮಾಡಿಸಿಕೊಂಡಿರುವ ಘಟನೆ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಕೃಷ್ಣಪ್ರಸಾದ್ ಎಂಬಾತ ನಗರದ ಆಕ್ಸೆಂಚರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ತನ್ನ ಪತ್ನಿ ಸುಪ್ರಿಯಾ ಎಂಬಾಕೆಯ ಜೊತೆ ಕೋರಮಂಗಲದ ವಿಟ್ಲಸಂದ್ರದಲ್ಲಿ ವಾಸವಾಗಿದ್ದ. ಟೆಕ್ಕಿ ಕೃಷ್ಣಪ್ರಸಾದ್ಗೆ ಪತ್ನಿ ಸುಪ್ರಿಯಾ ಟಾಟಾ ಎಐಎ ಇನ್ಯೂರೆನ್ಸ್ ನಲ್ಲಿ ಮಹಾರಕ್ಷ ಸುಪ್ರೀಂ ಪಾಲಿಸಿ ಮಾಡಿಸಿದ್ದಳು. ಕಳೆದ ವರ್ಷ ಮಾರ್ಚ್ ನಲ್ಲಿ ಪಾಲಿಸಿ ಮಾಡಿಸುವ ವೇಳೆ 3 ತಿಂಗಳ ವೇತನ ರಸೀದಿ, ಮೆಡಿಕಲ್ ಎಕ್ಸಾಮಿನೇಷನ್ ರಿಪೊರ್ಟ್ ಜೊತೆ ವಾರ್ಷಿಕ ವಿಮೆ ಮೊತ್ತ 51 ಸಾವಿರ ಹಣ ಕಟ್ಟಿದ್ದರು.
ಆದರೆ, ವಿಮೆ ಮಾಡಿಸುವ ವೇಳೆ ತನ್ನ ಗಂಡ ಕೃಷ್ಣಪ್ರಸಾದ್ಗೆ ಕ್ಯಾನ್ಸರ್ ಕಾಯಿಲೆ ಇರುವ ವಿಚಾರ ಮುಚ್ಚಿಟ್ಟಿದ್ದಾಳೆ. ಅಲ್ಲದೇ ವಿಮೆ ಕಟ್ಟಲು ಆರಂಭಿಸಿದ ಮೂರೇ ತಿಂಗಳಲ್ಲಿ ಕೃಷ್ಣಪ್ರಸಾದ್ ಮೃತಪಟ್ಟಿದ್ದಾನೆ.
ನಕಲಿ ದಾಖಲೆ ನೀಡಿ 3 ಕೋಟಿ ಕ್ಲೈಮ್ ಮಾಡಿದ್ದ ಚಾಲಾಕಿ:ಟಾಟಾ ಎಐಎ ಇನ್ಯೂರೆನ್ಸ್ ಕಂಪನಿಯಲ್ಲಿ ಗಂಡ ಕೃಷ್ಣಪ್ರಸಾದ್ ಹೆಸರಲ್ಲಿ 28 ವರ್ಷದ ಮಹಾರಕ್ಷ ಸುಪ್ರೀಂ ಪಾಲಿಸಿ ಮಾಡಿಸಿದ್ದ ಸುಪ್ರಿಯಾ, ಪಾಲಿಸಿ ಮಾಡಿಸಿದ್ದ ಮೂರೇ ತಿಂಗಳಲ್ಲಿ ಸುಪ್ರಿಯಾಳ ಗಂಡ ಚಿಕಿತ್ಸೆ ಫಲಿಸದೇ ಕ್ಯಾನ್ಸರ್ನಿಂದ ಮೃತಪಟ್ಟಿದ್ದರು. ಕ್ಯಾನ್ಸರ್ ನಿಂದ ಸಾವನ್ನಪ್ಪಿದರೆ ಜೀವವಿಮೆ ಹಣ ಕ್ಲೈಂ ಆಗಲ್ಲ ಎಂಬುದನ್ನ ಅರಿತಿದ್ದ ಸುಪ್ರಿಯಾ ತನ್ನ ಗಂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವಿಮೆಗೆ ಕ್ಲೈಂ ಅರ್ಜಿ ಸಲ್ಲಿಸಿ ಕಳೆದ ವರ್ಷ ಜುಲೈನಲ್ಲಿ 3 ಕೋಟಿ ರೂಪಾಯಿ ಕ್ಲೈಂ ಮಾಡಿಕೊಂಡಿದ್ದರು.