ಬೆಂಗಳೂರು:ಪ್ರಿಯಕರನ ಮೂಲಕ ಗಂಡನ ಕೊಲ್ಲಲು ಸುಪಾರಿ ನೀಡಿದ ಅರ್ಧಾಂಗಿ ಜೈಲುಪಾಲಾಗಿದ್ದಾರೆ. ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ಕೊಲೆಗೆ ಯತ್ನಿಸಿದ ಪ್ರಕರಣ ಭೇದಿಸಿದ ಪೊಲೀಸರು, ನಗರದ ಪೀಣ್ಯ ಸಮೀಪದ ದೊಡ್ಡಬಿದರಕಲ್ಲು ನಿವಾಸಿಗಳಾದ ಅನುಪಲ್ಲವಿ ಮತ್ತು ಆಕೆಯ ತಾಯಿ ಅಮುಜಮ್ಮ ಹಾಗೂ ಸಹಚರರಾದ ಪೀಣ್ಯ ಬಡಾವಣೆಯ ಹರೀಶ್, ನಾಗರಾಜು ಮತ್ತು ಮುಗಿಲನ್ ಎಂಬುವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನವೀನ್ ಹಾಗೂ ಅನುಪಲ್ಲವಿ ದಂಪತಿ ಪೀಣ್ಯ ಸಮೀಪದ ದೊಡ್ಡಬಿದರಕಲ್ಲುನಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಈ ನಡುವೆ ಪರಿಚಯವಾಗಿದ್ದ ಹಿಮಂತ ಎಂಬಾತನ ಜೊತೆ ಅನುಪಲ್ಲವಿ ಲವ್ವಿಡವ್ವಿ ಶುರು ಮಾಡಿಕೊಂಡಿದ್ದರು. ಇವರಿಬ್ಬರ ನಡುವಿನ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ನವೀನ್ನನ್ನೇ ಮುಗಿಸಲು ಇವರಿಬ್ಬರೂ ಪ್ಲಾನ್ ಮಾಡಿದ್ದರು. ಅದರಂತೆ ಅನುಪಲ್ಲವಿ, ಪ್ರಿಯಕರ ಹಿಮಂತನಿಗೆ ಕೊಲೆಗೆ 1 ಲಕ್ಷ ರೂಪಾಯಿ ಸುಪಾರಿ ನೀಡಿದ್ದರು.
ಸುಪಾರಿ ಪಡೆದ ಹಿಮಂತ, ತನ್ನಿಬ್ಬರು ಸ್ನೇಹಿತರಿಗೆ ಕೊಲೆ ಮಾಡಲು ತಿಳಿಸಿದ್ದ. ಬಳಿಕ ಹರೀಶ್ ಹಾಗೂ ನಾಗರಾಜ್ ಎಂಬಿಬ್ಬರು ನವೀನ್‌ನನ್ನು ಜುಲೈ 23ರಂದು ಕಿಡ್ನಾಪ್ ಮಾಡಿದ್ದರು. ಕಿಡ್ನಾಪ್ ಮಾಡಿ ತಮಿಳುನಾಡಿನ ವಿರೂದ್ ನಗರಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಕೊಲೆ ಮಾಡಲು ತಮಿಳುನಾಡಿನ ಮುಗಿಲನ್ ಹಾಗು ಕಣ್ಣನ್ ಎಂಬುವರನ್ನು ಕರೆಸಿಕೊಂಡಿದ್ದರು.
ಟೊಮೆಟೊ ಸಾಸ್ ಹಾಕಿ ಡ್ರಾಮಾ:ಆದರೆ ನವೀನ್‌ನನ್ನು ಕೊಲ್ಲಲು ಧೈರ್ಯ ಸಾಲದ ಆರೋಪಿಗಳು ಆತನಿಗೆ ಕಂಠಪೂರ್ತಿ ಮದ್ಯ ಕುಡಿಸಿದ್ದಾರೆ. ನವೀನ್ ಕುಡಿದು ಪ್ರಜ್ಞಾಹೀನ ಸ್ಥಿತಿ ತಲುಪಿದಾಗ ಆತನ ದೇಹದ ಮೇಲೆ ಟೊಮೆಟೊ ಸಾಸ್ ಹಾಕಿ ಫೋಟೋ ತೆಗೆದುಕೊಂಡಿದ್ದಾರೆ. ಆ ಫೋಟೋವನ್ನು ಅನುಪಲ್ಲವಿ ಪ್ರಿಯಕರ ಹಿಮಂತನಿಗೆ ಕಳುಹಿಸಿದ್ದಾರೆ. ಆದರೆ ಫೋಟೋ ನೋಡಿ ಗಾಬರಿಗೊಂಡ ಹಿಮಂತ, ನವೀನ್ ಕೊಲೆಯಾದ ಎಂದು ಪೊಲೀಸರಿಗೆ ಹೆದರಿ ಆ.1ರಂದು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.