ಬೆಂಗಳೂರು:ರಸ್ತೆ ಗುಂಡಿ ತಪ್ಪಿಸಲು ಹೋಗಿ ಸ್ಕೂಟರ್ ಮೇಲಿಂದ ಬಿದ್ದಾಗ ಕೆಎಸ್ಆರ್ಟಿಸಿ ಬಸ್ ಹರಿದು ಗಂಭೀರ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಆಕೆಯ ಮಗಳು ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ವಸಂತನಗರದ ನಿವಾಸಿ ಉಮಾ (42) ಮೃತ ಮಹಿಳೆ. ನಿನ್ನೆ ಶ್ರೀನಗರದಿಂದ ಮಾಗಡಿ ರೋಡ್ ಮೂಲಕ ಸುಜಾತ ಥಿಯೇಟರ್ ಬಳಿ ಉಮಾ ಮತ್ತು ಆಕೆಯ ಮಗಳಾದ ವನಿಯಾ ಸ್ಕೂಟರ್ ಮೇಲೆ ತೆರಳುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಹೊಂಡವನ್ನು ತಪ್ಪಿಸಲು ಹೋಗಿ ರಸ್ತೆ ಮೇಲೆ ಬಿದ್ದಿದ್ದರು. ಇವರ ಸ್ಕೂಟರ್ ಹಿಂದೆಯೇ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಇಬ್ಬರ ಮೇಲೆ ಹರಿದಿತ್ತು.
ಉಮಾ ಅವರ ಕಾಲ ಮೇಲೆ ಬಸ್ಸಿನ ಚಕ್ರ ಹರಿದು ತೀವ್ರ ರಕ್ತಸ್ರಾವವಾಗಿತ್ತು. ತಕ್ಷಣವೇ ಅವರನ್ನು ಅಸ್ಪತ್ರೆಗೆ ದಾಖಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಉಮಾ ಮೃತಪಟ್ಟಿದ್ದಾರೆ. ಇನ್ನು ಮಗಳು ವನಿತಾ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಘಟನೆ ಸಂಬಂಧ ಮಲ್ಲೇಶ್ವರ ಸಂಚಾರ ಪೊಲೀಸರು ಬಸ್ ಚಾಲಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹೇಗಾಯ್ತು:ತಾಯಿ ಉಮಾ ಮತ್ತು ಮಗಳು ವನಿತಾ ಅವರು ಶ್ರೀನಗರದಿಂದ ಮಾಗಡಿ ರೋಡ್ ಮೂಲಕ ಸುಜಾತಾ ಥಿಯೇಟರ್ ಬಳಿ ಸ್ಕೂಟರ್ ಮೇಲೆ ಬರುತ್ತಿದ್ದರು. ರಸ್ತೆ ಗುಂಡಿ ಕಂಡಿದ್ದು, ಗಾಡಿ ಓಡಿಸುತ್ತಿದ್ದ ವನಿತಾ ಅವರು ದಿಢೀರ್ ಬ್ರೇಕ್ ಹಾಕಿದ್ದಾರೆ. ಈ ವೇಳೆ ಹಿಂದೆಯೇ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಸ್ಕೂಟರ್ಗೆ ಗುದ್ದಿದೆ.
ಬಸ್ ಡಿಕ್ಕಿಯಾಗಿದ್ದರಿಂದ ಹಿಂದೆ ಕುಳಿತಿದ್ದ ಉಮಾ ಅವರು ರಸ್ತೆ ಮೇಲೆ ಬಿದ್ದಿದ್ದಾರೆ. ಬಸ್ನ ಚಕ್ರ ಆಕೆಯ ಕಾಲಿನ ಹರಿದುಕೊಂಡು ಹೋಗಿದೆ. ಉಮಾ ಅವರ ಕಾಲು ಛಿದ್ರವಾಗಿ ತೀವ್ರ ರಕ್ತಸ್ರಾವವಾಗಿದೆ. ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ವನಿತಾ ಅವರು ಕೂಡ ಗಾಯಗೊಂಡಿದ್ದು, ರಾಜಾಜಿನಗರ ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, ಇಬ್ಬರು ಮಹಿಳೆಯರು ಸ್ಕೂಟರ್ನಲ್ಲಿ ಬರುತ್ತಿದ್ದಾಗ ಗುಂಡಿ ತಪ್ಪಿಸಲು ಮಹಿಳೆ ಬ್ರೇಕ್ ಹಾಕಿ ನಿಲ್ಲಿಸಿದ್ದರು. ಸೂಟ್ಕರ್ ಹಿಂದಿದ್ದ ಬಸ್ ಗುದ್ದಿತು. ಓರ್ವ ಮಹಿಳೆ ಕೆಳಬಿದ್ದರು. ಈ ವೇಳೆ ಮಹಿಳೆಯ ಕಾಲ ಮೇಲೆ ಬಸ್ ಹತ್ತಿತು. ಈ ಘಟನೆಗೆ ರಸ್ತೆಗುಂಡಿಯೇ ಕಾರಣ ಎಂದು ಹೇಳಿದರು.
ಓದಿ:ಜನ್ಮದಿನದ ಸಂಭ್ರಮದಲ್ಲಿ ವಿಹಾರಕ್ಕೆ ತೆರಳಿದ್ದ ಐವರು ಮಕ್ಕಳು.. ನದಿಯಲ್ಲಿ ಮುಳುಗಿ ಸಾವು