ಬೆಂಗಳೂರು: ಮಾದಕ ವಸ್ತು ಮಾರಾಟ ದಂಧೆಯಲ್ಲಿ ಪತಿ ಜೈಲು ಪಾಲಾದ ಬಳಿಕ ದಂಧೆಯನ್ನು ಮುಂದುವರೆಸುತ್ತಿದ್ದ ಚಾಲಾಕಿ ಮಹಿಳೆಯನ್ನು ಕಲಾಸಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಹಿಳೆಯನ್ನು ನಗ್ಮಾ (27) ಎಂದು ಗುರುತಿಸಲಾಗಿದೆ. ಈಕೆಯಿಂದ 13 ಲಕ್ಷ ರೂ ಮೌಲ್ಯದ 26 ಕೆ.ಜಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಶಾಖಪಟ್ಟಣಂನಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ನಗ್ಮಾಳ ಪತಿ ಮುಜ್ಜುನನ್ನು ಕಳೆದ ಒಂದು ತಿಂಗಳ ಹಿಂದೆ ಜೆ.ಜೆ.ನಗರ ಠಾಣಾ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಗಂಡನ ಬಂಧನದ ಬಳಿಕ ತಾನೂ ಸಹ ಅದೇ ದಾರಿ ಆಯ್ದುಕೊಂಡಿದ್ದ ನಗ್ಮಾ, ತಾಯಿ ಹಾಗೂ ಮೂವರು ಮಕ್ಕಳೊಂದಿಗೆ ವಿಶಾಖಪಟ್ಟಣಂಗೆ ಹೋಗುತ್ತಿದ್ದಳು. ಒಂದು ದಿನ ಅಲ್ಲಿಯೇ ರೂಂ ಪಡೆದು ವಾಸವಿದ್ದು, ಗಾಂಜಾ ಖರೀದಿಸಿ ಮರುದಿನ ಬಸ್ ಮೂಲಕ ಬೆಂಗಳೂರಿಗೆ ಬರುತ್ತಿದ್ದಳು. ಮಕ್ಕಳು, ಬ್ಯಾಗ್ ಇರುವುದನ್ನು ಕಂಡ ಪೊಲೀಸರು ಯಾವುದೋ ಕುಟುಂಬಸ್ಥರು ಹೋಗುತ್ತಿದ್ದಾರೆ ಎಂದು ಪರಿಶೀಲನೆ ಮಾಡುತ್ತಿರಲಿಲ್ಲ. ಇದನ್ನೇ ಬಂಡವಾಳವಾಗಿಸಿಕೊಂಡ ನಗ್ಮಾ ಸಲೀಸಾಗಿ ಬೆಂಗಳೂರಿಗೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದಳು.
ಇದೇ ರೀತಿ ಮಾರ್ಚ್ 20ರಂದು ವಿಶಾಖಪಟ್ಟಣದಿಂದ ಗಾಂಜಾ ತಂದಿದ್ದ ನಗ್ಮಾ ಕಲಾಸಿಪಾಳ್ಯದ ಕಾರ್ನೇಷಲ್ ಸರ್ಕಲ್ ಬಳಿ ನಿಂತಿದ್ದಾಗ ಪೊಲೀಸರು ಪರಿಶೀಲಿಸಿದ್ದಾರೆ. ಈ ವೇಳೆ ನಗ್ಮಾ ಬಳಿ 26 ಕೆಜಿ ಗಾಂಜಾ ದೊರಿತಿದೆ. ಕೂಡಲೇ ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.