ಬೆಂಗಳೂರು:ಇಲ್ಲಿನ ಮಾರುತಿ ನಗರದಲ್ಲಿರುವ ಒಂದೇ ಕಟ್ಟಡದ ಕೆಳಮನೆಯಲ್ಲಿರುವ ವ್ಯಕ್ತಿಯ ಪತ್ನಿ ಮತ್ತು ಮೇಲ್ಮನೆಯಲ್ಲಿರುವ ಮಹಿಳೆಯ ಪತಿ ಒಂದೇ ದಿನ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವವರ ಪತಿ ಮತ್ತು ಪತ್ನಿ ಪ್ರತ್ಯೇಕ ದೂರು ನೀಡಿ, ತಮ್ಮವರನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ.
ಮಕ್ಕಳ ಜೊತೆ ಮಹಿಳೆ ನಾಪತ್ತೆ:ಕೆಳಮನೆಯಲ್ಲಿದ್ದ 22 ವರ್ಷದ ಗೃಹಿಣಿಗೆ ಇಬ್ಬರು ಮಕ್ಕಳಿದ್ದಾರೆ. ಮೇಲ್ಮನೆಯಲ್ಲಿದ್ದ 37 ವರ್ಷದ ವ್ಯಕ್ತಿಗೆ 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಇವರಿಗೂ ಸಹ ಇಬ್ಬರು ಮಕ್ಕಳಿದ್ದಾರೆ. ಈತ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. 2022ರ ಡಿಸೆಂಬರ್ 9 ರಂದು ಬೆಳಿಗ್ಗೆಯಿಂದ ಇಬ್ಬರೂ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಹತ್ತಿರದ ಸಂಬಂಧಿಕರು, ಸ್ನೇಹಿತರನ್ನು ವಿಚಾರಿಸಿದ್ರೂ ಮಾಹಿತಿ ಸಿಕ್ಕಿಲ್ಲ. ನಾಪತ್ತೆಯಾದ ಮಹಿಳೆ ತನ್ನ ಜೊತೆಯಲ್ಲಿ ಮಗುವನ್ನು ಕರೆದುಕೊಂಡು ಹೋಗಿದ್ದಾಳೆ. ಅನುಮಾನ ವ್ಯಕ್ತಪಡಿಸಿ ಕಾಣೆಯಾದ ಮಹಿಳೆಯ ಪತಿ ಮತ್ತು ವ್ಯಕ್ತಿಯ ಪತ್ನಿ ಪೊಲೀಸ್ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದಾರೆ.
ಕೆಳಮನೆಯ ಮಹಿಳೆ, ಮೇಲಿನ ಮನೆಯ ಪುರುಷ:ಮಾರುತಿ ನಗರದ ಒಂದೇ ಕಟ್ಟಡದಲ್ಲಿ ಇಬ್ಬರ ಕುಟುಂಬಸ್ಥರು ವಾಸವಾಗಿದ್ದು ಪರಸ್ಪರ ಪರಿಚಯಸ್ಥರಾಗಿದ್ದರು. ಒಂದೇ ದಿನ ಕಾಣೆಯಾಗಿರುವುದರಿಂದ ಇಬ್ಬರೂ ಒಟ್ಟಿಗೆ ಹೋಗಿದ್ದಾರೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. 'ಡಿಸೆಂಬರ್ 9ರ ಬೆಳಿಗ್ಗೆ ಸ್ಯಾಂಟ್ರೋ ಕಾರಿನಲ್ಲಿ ಹೋದ ನನ್ನ ಗಂಡ ವಾಪಸ್ ಮನೆಗೆ ಬಂದಿಲ್ಲ. ನನ್ನ ಗಂಡ ನಾಪತ್ತೆಯಾದ ದಿನದಿಂದ ಕೆಳಮನೆಯ ವ್ಯಕ್ತಿಯ ಪತ್ನಿ ಕೂಡ ಕಾಣಿಸುತ್ತಿಲ್ಲ. ಈ ಬಗ್ಗೆ ಕೆಳಮನೆಯ ವ್ಯಕ್ತಿ ಕೂಡ ಹೇಳಿಕೊಂಡಿದ್ದಾರೆ. ಆಕೆಯ ಜೊತೆ ನನ್ನ ಗಂಡ ಹೋಗಿರುವ ಗುಮಾನಿ ಇದ್ದು, ಅವರನ್ನು ಹುಡುಕಿ ಕೊಡಿ' ಎಂದು ನಾಪತ್ತೆಯಾಗಿರುವ ವ್ಯಕ್ತಿಯ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.