ಬೆಂಗಳೂರು: ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಐದು ಭಾಗ್ಯಗಳ ಕುರಿತು ವಿವರಣೆ ನೀಡುವ ಬದಲು ಕೇಂದ್ರ ಸರ್ಕಾರ ಹಾಗೂ ಮೋದಿ ವಿರುದ್ಧ ವಾಗ್ದಾಳಿ ನಡೆಸಲು ಸಮಯವನ್ನು ಬಳಸಿಕೊಂಡಿದ್ದು ವಿಪರ್ಯಾಸ ಎಂದು ವಿಧಾನ ಪರಿಷತ್ ಬಿಜೆಪಿ ಹಿರಿಯ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ. ವಿಧಾನ ಪರಿಷತ್ನಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಂದರ್ಭ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾರೆ ಎಂದು ಆರೋಪಿಸಿ ಸಭಾತ್ಯಾಗ ಮಾಡಿದ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.
ಇಂದು ಮುಖ್ಯಮಂತ್ರಿಗಳು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಲು ಬಂದಿದ್ದರು. ರಾಜ್ಯಪಾಲರು ಭಾಷಣದಲ್ಲಿ ರಾಜ್ಯ ಸರ್ಕಾರ ಉಲ್ಲೇಖಿಸಿರುವ 5 ಭಾಗ್ಯಗಳ ಕುರಿತು ಮಾಹಿತಿ ಕೊಡುತ್ತಾರೆ ಎಂದು ಭಾವಿಸಿದ್ದೆವು. ಆದರೆ, ಇವುಗಳ ಬಗ್ಗೆ ಅಸ್ಪಷ್ಟವಾದ ಉತ್ತರ ನೀಡಿ, ಬಸವರಾಜ ಬೊಮ್ಮಾಯಿ ಸರ್ಕಾರ ನೀಡಿದ್ದ ವಿದ್ಯಾನಿಧಿ ಯೋಜನೆಯನ್ನು ಮುಂದುವರಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಸಹ ಉತ್ತರ ನೀಡದೆ, ಯಾವುದೇ ವಿಚಾರಕ್ಕೂ ಸಮರ್ಪಕವಾದ ಉತ್ತರ ಕೊಟ್ಟಿಲ್ಲ.
ಕೇಂದ್ರ ಸರ್ಕಾರ ಪ್ರತಿ ಬಿಪಿಎಲ್ ಪಡಿತರ ಚೀಟಿದಾರ ವ್ಯಕ್ತಿಗೆ ತಲಾ ಐದು ಕೆಜಿಯಂತೆ ಉಚಿತವಾಗಿ ಅಕ್ಕಿ ನೀಡುತ್ತಿದೆ. ಕರ್ನಾಟಕಕ್ಕೆ 22.5 ಲಕ್ಷ ಕೋಟಿ, ತಮಿಳುನಾಡಿಗೆ 34 ಲಕ್ಷ ಕೋಟಿ, ಕೇರಳಕ್ಕೆ 14 ಲಕ್ಷ ಕೋಟಿ ಸೇರಿದಂತೆ ದೇಶಾದ್ಯಂತ 81 ಕೋಟಿ ಜನರಿಗೆ 549 ಲಕ್ಷ ಕ್ವಿಂಟಲ್ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಇದೆಲ್ಲವನ್ನೂ ಆಹಾರ ಭದ್ರತಾ ಯೋಜನೆ ಅಡಿ ಈ ಅಕ್ಕಿಗಳನ್ನು ನೀಡುತ್ತಿರುವುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಆದರೂ ನಾನು 10 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿದ್ದೆ, ಆದರೆ ಕೇಂದ್ರ ಸರ್ಕಾರ ಈಗ ಅಕ್ಕಿ ನೀಡಲು ನಿರಾಕರಿಸುತ್ತಿದೆ ಎಂದು ಅನಗತ್ಯವಾಗಿ ಆರೋಪಿಸುತ್ತಿದ್ದಾರೆ ಎಂದರು.
ಟೀಕೆಯಲ್ಲೇ ಕಾಲಹರಣ ಆರೋಪ:ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಬಿಜೆಪಿ ನಾಯಕರ ವಿರುದ್ಧ ಟೀಕೆ ಟಿಪ್ಪಣಿ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗೂ ಸಿದ್ದರಾಮಯ್ಯ ಉತ್ತರಿಸಿಲ್ಲ. ಕೇಂದ್ರ ಸರ್ಕಾರ ಹಾಗೂ ಪ್ರಧಾನಿಯನ್ನು ದೂಷಿಸುವುದು ಮತ್ತು ಬಿಜೆಪಿಯನ್ನು ದೂರೋದನ್ನ ಬಿಟ್ಟರೆ, ರಾಜ್ಯಪಾಲರ ಭಾಷಣದ ಮೂಲಕ ಯಾವ ಯೋಜನೆಗಳನ್ನು ನೀಡಿದ್ದಾರೆ ಮತ್ತು ಅವರು ಯಾವ ಸಾಧನೆ ಮಾಡಿದ್ದಾರೆ ಎಂಬ ಮಾಹಿತಿ ಕೊಟ್ಟಿಲ್ಲ. ಐದು ಗ್ಯಾರಂಟಿಯನ್ನು ಕಾಂಗ್ರೆಸ್ ಪಕ್ಷ ನೀಡಿದ್ದು, ಅದನ್ನು ಹೇಗೆ ನಿಭಾಯಿಸುತ್ತಾರೆ. ಆರ್ಥಿಕ ಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಬಗ್ಗೆ ಯೋಚನೆ ಮಾಡದೆ, ಮೋದಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರವನ್ನು ಟೀಕೆ ಮಾಡುವುದರಲ್ಲಿ ಕಾಲಹರಣ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ರಾಜ್ಯಪಾಲರ ಭಾಷಣದ ಮೇಲೆ ಉತ್ತರಿಸುವ ಬದಲು ಒಂದು ರೀತಿ ಚುನಾವಣಾ ಪ್ರಚಾರ ಭಾಷಣದ ರೀತಿ ಮುಖ್ಯಮಂತ್ರಿ ಮಾತನಾಡಿದರು. ನ್ಯೂ ಭಾಷಣ ಮಾಡಬೇಡಿ ರಾಜ್ಯಪಾಲರ ಭಾಷಣಕ್ಕೆ ಉತ್ತರ ಕೊಡಿ ಎಂದು ಕೇಳಿದ್ದಕ್ಕೆ ಒಂದು ರೀತಿಯ ಬೇಜವಾಬ್ದಾರಿ ವರ್ತನೆ ಮಾಡಿದ ಹಿನ್ನೆಲೆಯಲ್ಲಿ ನಾವು ಅವರ ಬೆದರಿಕೆ ಪ್ರೀತಿಯ ಮಾತನ್ನು ಖಂಡಿಸಿ ವಿಧಾನ ಪರಿಷತ್ ಕಲಾಪದಿಂದ ಸಭಾತ್ಯಾಗ ಮಾಡಿ ಹೊರ ಬಂದಿದ್ದೇವೆ. ಮುಖ್ಯಮಂತ್ರಿ ಅವರ ಹೊಣೆಗಾರಿಕೆ ಇಲ್ಲದ ಮಾತನ್ನು ಬಿಜೆಪಿ ಖಂಡಿಸುತ್ತದೆ. ಸಭಾತ್ಯಾಗ ಮಾಡುವ ಜೊತೆಗೆ ಕೊಟ್ಟ ಮಾತನ್ನ ಈಡೇರಿಸಿಕೊಳ್ಳುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗುತ್ತಿದೆ ಎಂಬುದನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದೇವೆ ಎಂದರು.