ಬೆಂಗಳೂರು:ಸರ್ಕಾರದಿಂದ ಬಡವರಿಗೆ ಮನೆ ಹಂಚಿಕೆ ಕೆಲಸ ನಿರ್ದಿಷ್ಟ ಅವಧಿಯೊಳಗೆ ಮಾಡದಿದ್ದರೆ ಜೈ ಬೋಲೋ ಭಾರತ್ ಚಳವಳಿ ಆರಂಭಿಸಿ ದೆಹಲಿಗೆ ಹೋಗುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಅಧ್ಯಕ್ಷರೂ ಆಗಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ನೇತೃತ್ವದ ನಿಯೋಗ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು. ಬಡವರಿಗೆ ವಸತಿ ಹಂಚುವ ಯೋಜನೆಗಳ ಲೋಪದೋಷಗಳ ಕುರಿತು ಮಾತುಕತೆ ನಡೆಸಿತು. ಕಾಲಮಿತಿಯಲ್ಲಿ ನಿವಾಸಗಳ ಹಂಚಿಕೆ ಮಾಡುವಂತೆ ಸಿಎಂಗೆ ಮನವಿ ಮಾಡಿತು.
ಸಿಎಂ ಜೊತೆ ಚರ್ಚೆ ನಡೆಸಿದ ಹೆಚ್.ಎಸ್.ದೊರೈಸ್ವಾಮಿ ಸಿಎಂ ಬಿಎಎಸ್ವೈ ಭೇಟಿ ಬಳಿಕ ಮಾತನಾಡಿದ ದೊರೆಸ್ವಾಮಿ, ಸರ್ಕಾರದಿಂದ ಬಡವರಿಗೆ ಮನೆ ಹಂಚಿಕೆ ಕೆಲಸ ಆಗಿಲ್ಲ. ನಿರ್ದಿಷ್ಟ ಅವಧಿಯೊಳಗೆ ಇದನ್ನು ಮುಗಿಸೋ ಕೆಲಸ ಮಾಡಬೇಕು. ಬೆಂಗಳೂರಿನ ಸುತ್ತಮುತ್ತ ಗ್ರೀನ್ ಬೆಲ್ಟ್ ಜಮೀನನ್ನು ವಸತಿಗಾಗಿ ಕೊಡಬೇಕು. ಆ ಜಮೀನಿನಲ್ಲಿ ಬಡವರಿಗೆ ಮನೆ ಕಟ್ಟಿಕೊಡಬೇಕು. ಡೀಮ್ಡ್ ಜಮೀನನ್ನು ವ್ಯವಸಾಯಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿಗೆ ಕೇಳಿಕೊಂಡಿದ್ದೇವೆ. ಸಿಎಂ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಮಾಡುವುದಾಗಿ ಭರವಸೆ ಕೂಡ ನೀಡಿದರು ಎಂದರು.
ನಾನು ಸಾಯೋದರ ಒಳಗೆ ಈ ಕೆಲಸ ಮಾಡಿಕೊಡಿ ಎಂದು ಸಿಎಂಗೆ ಮನವಿ ಮಾಡಿದ್ದೇನೆ. ಎರಡು ತಿಂಗಳೊಳಗೆ ಮನೆ ಹಂಚಿಕೆ ಆಗದೆ ಇದ್ದರೆ ಜೈ ಬೋಲೋ ಭಾರತ್ ಚಳವಳಿ ಮಾಡುತ್ತೇವೆ. 5 ಸಾವಿರ ಜನ ಸೇರಿ ದೆಹಲಿಗೆ ಹೋಗುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.