ಬೆಂಗಳೂರು: ರಾಜ ರಾಜೇಶ್ವರಿ ನಗರದ ಮನೆಯೊಂದರಲ್ಲಿ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಬೆಳೆ ಬಾಳುವ ಚಿನ್ನಾಭರಣ ದೋಚಿದ್ದು, ಈ ಪ್ರಕರಣ ಹಿನ್ನೆಲೆ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಖದೀಮನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಗ್ರಾಮದ ಬಸವರಾಜ ವಡ್ಡರ ಧ್ಯಾಮಣ್ಣ ಬಂಧಿತ ಆರೋಪಿ. ಈತ ಕದ್ದೊಯ್ದಿದ್ದ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಳೆ, ನೆಕ್ಲೇಸ್ ಹಾಗೂ ಡೈಮಂಡ್ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜ ರಾಜೇಶ್ವರಿ ನಗರದ ಐಡಿಯಲ್ ಹೋಮ್ನ ಅರ್ಚಿತ ಡೆಫ್ಯೂಡೂಯಲ್ ಅಪಾರ್ಟ್ಮೆಂಟ್ನಲ್ಲಿ 80 ವರ್ಷದ ಕುಲಕರ್ಣಿ ಅವರ ಕುಟುಂಬ ವಾಸವಾಗಿತ್ತು. ಕುಲಕರ್ಣಿ ದಂಪತಿಗೆ ವಯಸ್ಸಾಗಿದ್ದರಿಂದ ಅವರನ್ನು ನೋಡಿಕೊಳ್ಳಲು ಕುಲಕರ್ಣಿ ಅವರ ಮನೆಯವರು ಬಸವರಾಜ್ ವಡ್ಡರ ಧ್ಯಾಮಣ್ಣ ನನ್ನು ಕೇರ್ ಟೇಕರ್ ಆಗಿ ನೇಮಿಸಿಕೊಂಡಿದ್ದರು. ಹೆಲ್ತ್ ಪರ್ಸ್ ನರ್ಸಿಂಗ್ ಸರ್ವೀಸ್ ಮೂಲಕ ಬಸವರಾಜ್ ಕುಲಕರ್ಣಿ ದಂಪತಿಯ ಕೇರ್ ಟೇಕರ್ ಆಗಿ ನೇಮಕಗೊಂಡಿದ್ದನು. ಈತನಿಗೆ ತಿಂಗಳಿಗೆ 30 ಸಾವಿರ ಸಂಬಳ ಕೊಡುವುದಾಗಿ ಹೇಳಿ ಕಳೆದ ಜನವರಿ 7 ರಂದು ಕುಟುಂಬದವರು ನಿಯೋಜಿಸಿಕೊಂಡಿದ್ದರು.
ಆದರೆ ಬಸವರಾಜ್ ಕೇರ್ ಟೇಕರ್ ಆಗಿ ಕೆಲಸಕ್ಕೆ ಸೇರಿದ ಮೂರೇ ದಿನಗಳಲ್ಲಿ ತನ್ನ ಕೈಚಳಕ ತೋರಿದ್ದಾರೆ. ಮಾತನಾಡಿಕೊಂಡಂತೆ ಕುಲಕರ್ಣಿ ದಂಪತಿಯ ಕೇರ್ ಟೇಕರ್ ಆಗಿ ಬಸವರಾಜ್ ಕೆಲಸಕ್ಕೆ ಸೇರಿಕೊಂಡಿದ್ದನು. ಕೆಲಸಕ್ಕೆ ಸೇರಿದ ಮೂರೇ ದಿನಕ್ಕೆ ಬಸವರಾಜ್ ತಾನು ಊರಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದಾನೆ. ಆದರೆ ಈತ ಊರಿಗೆ ಹೋಗುವಾಗ ಬರಿಗೈಯಲ್ಲಿ ಹೋಗದೆ ಮನೆಯಲ್ಲಿದ್ದ ಸುಮಾರು 10 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಎಗರಿಸಿ ಊರಿಗೆ ಹೋಗಿ ಬರುವುದಾಗಿ ಸುಳ್ಳು ಹೇಳಿ ಎಸ್ಕೇಪ್ ಆಗಿದ್ದನು. ಆದರೆ ಇದ್ಯಾವುದರ ಅರಿವೇ ಇಲ್ಲದ ಹೆಲ್ತ್ ಪರ್ಸ್ ನರ್ಸಿಂಗ್ ಸರ್ವೀಸ್ ಈತ ಊರಿನಿಂದ ಹಿಂತಿರುಗಿ ಬರುವವರೆಗೆ ಈತನ ಬದಲಿಗೆ ಬೇರೆಯವರನ್ನು ಕೇರ್ ಟೇಕರ್ ಆಗಿ ಕೆಲಸಕ್ಕೆ ಸೇರಿಸಿದ್ದರು.