ಸಚಿವ ಕೆ ಎಚ್ ಮುನಿಯಪ್ಪ ಹೇಳಿಕೆ ಬೆಂಗಳೂರು: ಅನ್ನಭಾಗ್ಯ ಯೋಜನೆ ಜಾರಿಗೆ ಬಂದ ಒಂದು ತಿಂಗಳೊಳಗೆ ಒಂದು ಕೋಟಿಗೂ ಅಧಿಕ ಪಡಿತರ ಕುಟುಂಬಗಳ ಫಲಾನುಭವಿಗಳಿಗೆ 566 ಕೋಟಿ ರೂ. ಜಮೆ ಮಾಡಲಾಗಿದೆ. ಇದರಿಂದ 3.50 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಿದೆ. ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಲು 10 ವರ್ಷಗಳ ಹಿಂದೆ ಅನ್ನಭಾಗ್ಯ ಯೋಜನೆಯನ್ನು ಆರಂಭಿಸಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದರು.
ಅನ್ನಭಾಗ್ಯ ಯೋಜನೆಯ (DBT) ಡಿಬಿಟಿ ಅನುಷ್ಠಾನ ಹಾಗೂ ಇಲಾಖೆಯ ಮತ್ತಿತರ ವಿಷಯಗಳ ಮಾಹಿತಿ ಕುರಿತು ವಿಧಾನಸೌಧದಲ್ಲಿ ಮಾಹಿತಿ ನೀಡಿದ ಸಚಿವರು, ಈ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ-2 ಕೇಂದ್ರ ಸರ್ಕಾರವು ದೇಶವನ್ನು ಹಸಿವು ಮುಕ್ತಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013 ಜಾರಿಗೆ ತಂದಿತ್ತು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಚುನಾವಣಾ ಸಂದರ್ಭದಲ್ಲಿ ನೀಡಿದ ವಾಗ್ದಾನದಂತೆ ಅನ್ನಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲು ಜುಲೈ 10ರಂದು ಚಾಲನೆ ನೀಡಲಾಗಿದೆ ಎಂದರು.
ಅನ್ನಭಾಗ್ಯ ಯೋಜನೆಯು ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯಡಿ ಅಂತ್ಯೋದಯ ಪಡಿತರ ಚೀಟಿಗೆ 35 ಕೆ.ಜಿ ಪಡಿತರ ಧಾನ್ಯ ಮತ್ತು ಆದ್ಯತಾ ಪಡಿತರ ಚೀಟಿಯ ಫಲಾನುಭವಿಗಳಿಗೆ 5 ಕೆ.ಜಿ ಪಡಿತರ ಧಾನ್ಯದ ಜೊತೆಗೆ ಹೆಚ್ಚುವರಿಯಾಗಿ ತಲಾ 5 ಕೆ.ಜಿ ಪಡಿತರ ಧಾನ್ಯ ಸೇರಿ ಒಟ್ಟು ತಲಾ 10 ಕೆ.ಜಿ. ಪಡಿತರ ನೀಡುವುದು ಈ ಗ್ಯಾರಂಟಿ ಯೋಜನೆಯ ಉದ್ದೇಶವಾಗಿದೆ.
ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅಕ್ಕಿ ನೀಡಲು ನಿರಾಕರಿಸಿದ 5 ಕೆ.ಜಿ. ಆಹಾರ ಧಾನ್ಯಗಳ ಬದಲಾಗಿ ಅರ್ಹ ಫಲಾನುಭವಿಗಳಿಗೆ ಪ್ರತಿ ಕೆ.ಜಿ.ಗೆ FOOD CORPORATION OF INDIA (FCI) ನಿಗಧಿಪಡಿಸಿದ ರೂ. 34/- ರಂತೆ ಪುತಿ ಫಲಾನುಭವಿಗೆ ರೂ. 170/- ನೇರ ನಗದು ವರ್ಗಾವಣೆ (DBT) ಮೂಲಕ ಕುಟುಂಬದ ಮಾಡಲಾಗುತ್ತಿದೆ. ರಾಜ್ಯದಲ್ಲಿ 1.28 ಕೋಟಿ ಪಡಿತರ ಚೀಟಿ ಕುಟುಂಬಗಳಲ್ಲಿ 4.42 ಕೋಟಿ ಫಲಾನುಭವಿಗಳು ಇರುತ್ತಾರೆ. ಈವರೆವಿಗೂ 1 ಕೋಟಿ ಕುಟುಂಬಗಳಿಗೆ ರೂ. 566,00 ಕೋಟಿ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ 3.50 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಯೋಜನೆಗೆ ಚಾಲನೆ ದೊರೆತು ಇಂದಿಗೆ 25 ದಿನಗಳಾಗಿದೆ. ಅತಿ ಕಡಿಮೆ ಸಮಯದಲ್ಲಿ ನಮ್ಮ ಇಲಾಖೆಯು 1 ಕೋಟಿ ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಮಾಡಿರುವುದು ದಾಖಲೆಯಾಗಿದೆ. ಉಳಿದಂತೆ 28 ಲಕ್ಷ ಕುಟುಂಬಗಳಲ್ಲಿ ಕಳೆದ ಮೂರು ತಿಂಗಳಲ್ಲಿ ಒಂದು ತಿಂಗಳಾದರೂ ಪಡಿತರ ಪಡೆಯದೇ ಇರುವ ಫಲಾನುಭವಿಗಳು 5,32,349, ಅಂತ್ಯೋದಯ ಅನ್ನ ಪಡಿತರ ಚೀಟಿದಾರರಲ್ಲಿ ಮೂರು ಸದಸ್ಯರಿಗಿಂತ ಕಡಿಮೆ ಫಲಾನುಭವಿಗಳ ಸಂಖ್ಯೆ 3,40,425 ಹಾಗೂ ಚಾಲ್ತಿಯಲ್ಲಿ ಇರದೇ ಹಾಗೂ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಆಗದಿರುವ ಹಾಗೂ ಅನರ್ಹ ಪಡಿತರ ಚೀಟಿಗಳ ಸಂಖ್ಯೆಯು 19,27,226 ಇದೆ ಎಂದು ಮಾಹಿತಿ ನೀಡಿದರು.
ಈ ಸಂಬಂಧ ಇಲಾಖೆಯು ಬ್ಯಾಂಕ್ ಖಾತೆ ಹೊಂದದಿರುವ ಕುಟುಂಬದ ಮುಖ್ಯಸ್ಥರ ವಿವರಗಳನ್ನು ಜಿಲ್ಲಾ, ತಾಲೂಕು ಹಾಗೂ ನ್ಯಾಯಬೆಲೆ ಅಂಗಡಿವಾರು ವಿಂಗಡಿಸಿ, ವಡಿತರ ಚೀಟಿದಾರರಿಗೆ ಹೊಸ ಬ್ಯಾಂಕ್ ಖಾತೆ ತೆರೆಯುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಅಲ್ಲದೇ ಅಂಚೆ ಇಲಾಖೆಯ ಸಹಯೋಗದೊಂದಿಗೆ ಜುಲೈ-2023ರ ಮಾಹೆಯಲ್ಲಿ 15-20 ದಿನದೊಳಗೆ ನ್ಯಾಯಬೆಲೆ ಅಂಗಡಿಗಳಲ್ಲಿ 170 ಕ್ಯಾಂಪ್ ಏರ್ಪಡಿಸಿ, 1,19,502 ಹೊಸ ಬ್ಯಾಂಕ್ ಖಾತೆ ತೆರೆಯಲಾಗಿದೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ:Anna Bhagya: ಅನ್ನಭಾಗ್ಯದಡಿ ಈವರೆಗೆ 3.29 ಕೋಟಿ ಫಲಾನುಭವಿಗಳಿಗೆ ಹಣ ಜಮೆ: ಹಲವರಿಗೆ ಪಾವತಿ ವಿಳಂಬ