ಬೆಂಗಳೂರು: "ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಸಂಪಾದನೆ ಆರೋಪ ಗಂಭೀರ ಸ್ವರೂಪದ್ದಾಗಿದೆ. ಈ ಪ್ರಕರಣದ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆ ತೆಗೆದುಕೊಂಡಿರುವ ನಿರ್ಣಯ ಅಕ್ಷಮ್ಯ. ಇದನ್ನು ಆಮ್ ಆದ್ಮಿ ಪಕ್ಷ ಖಡಾಖಂಡಿತವಾಗಿ ತಿರಸ್ಕರಿಸುತ್ತದೆ" ಎಂದು ಆಪ್ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, "ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿದೆ. ಚಾರ್ಜ್‌ಶೀಟ್ ಹಾಕುವ ಹಂತಕ್ಕೆ ಬಂದಿದೆ. ಮುಕ್ತಾಯ ಹಂತದಲ್ಲಿರುವ ಪ್ರಕರಣವನ್ನು ಸಿಬಿಐ ತನಿಖೆಯಿಂದ ಹಿಂಪಡೆಯುವುದು ದುರುದ್ದೇಶಪೂರಿತವಾಗಿದೆ. ಈ ನಿರ್ಧಾರ ಕಾನೂನಿಗೆ ವಿರುದ್ಧವಾಗಿದೆ" ಎಂದಿದ್ದಾರೆ.
"ಜನಸಾಮಾನ್ಯರ, ರೈತರ ಆಸ್ತಿಗಳಲ್ಲಿ ಕೊಂಚವೂ ಹೆಚ್ಚಾಗುವುದಿಲ್ಲ. ಆದರೆ, ರಾಜಕಾರಣಿಗಳ ಆಸ್ತಿ ನೂರಾರು ಪಟ್ಟು ಹೆಚ್ಚಾಗುವುದು ಹೇಗೆ? 2013-18ರ ಐದು ವರ್ಷದಲ್ಲಿ ಶಿವಕುಮಾರ್ ಅವರ ಆಸ್ತಿ ಶೇ 380ರಷ್ಟು ಏರಿಕೆಯಾಗಿದೆ. ಇದು ಹೇಗೆ ಸಾಧ್ಯವಾಯ್ತು ಎಂಬುದಕ್ಕೆ ಆಧಾರ ಬೇಕಲ್ಲವೇ? ಒಟ್ಟಿನಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ರಕ್ಷಣೆ ಮಾಡಲು ರಾಜ್ಯ ಸರ್ಕಾರ ಈ ಹಾದಿಯನ್ನು ತುಳಿದಿದೆ. ತಪ್ಪು ಮಾಡಿಲ್ಲ ಎಂದಾದರೆ ಸಂಪೂರ್ಣ ತನಿಖೆಯನ್ನು ಎದುರಿಸಿ ದೋಷಮುಕ್ತರಾಗಬೇಕು. ತಮ್ಮ ಆದಾಯ ಮೂಲವನ್ನು ತೋರಿಸಿ ಅಕ್ರಮ ಆಸ್ತಿಯಲ್ಲ ಎಂದು ನಿರೂಪಿಸಬೇಕು. ಆದರೆ ತನಿಖೆಯನ್ನೇ ಮಾಡದಂತೆ ನಿರ್ಬಂಧ ಹೇರುತ್ತಾರೆ ಎಂದರೆ ಡಿ.ಕೆ. ಶಿವಕುಮಾರ್ ತಪ್ಪಿತಸ್ಥರು ಎಂದಾಗುತ್ತದೆಯಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
"ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಸಹ ತಮಗೆ ಬೇಕಾಗಿರುವ ರೀತಿ ಕಾನೂನು ವ್ಯಾಖ್ಯಾನಗಳನ್ನು ನೀಡುವ ಮೂಲಕ ಸಿಬಿಐ ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ನಿನ್ನೆಯ ಸಂಪುಟ ಸಭೆಯ ನಿರ್ಧಾರದಿಂದ ಸ್ಪಷ್ಟವಾಗುತ್ತಿದೆ. ಸರ್ಕಾರಗಳು ಬದಲಾದಂತೆ ತೀರ್ಮಾನ ಬದಲಾವಣೆಯಾಗುವುದು ಒಳ್ಳೆಯ ಸಂಪ್ರದಾಯ ಅಲ್ಲ. ಹಿಂದಿನ ಬಿಜೆಪಿ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವ ಮುನ್ನ ಸ್ಪೀಕರ್ ಅನುಮತಿ ಪಡೆದಿರಲಿಲ್ಲ ಎಂಬ ಸಬೂಬು ನೀಡುವುದು ತಪ್ಪು. ರಾಜ್ಯ ಸರ್ಕಾರ ಕೂಡಲೇ ಈ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ, ತನಿಖೆಗೆ ಸಹಕರಿಸಬೇಕು" ಎಂದು ಒತ್ತಾಯಿಸಿದ್ದಾರೆ.