ಬೆಂಗಳೂರು :ಇನ್ನು 10 ದಿನಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೂ ಕೋವಿಡ್ ಲಸಿಕೆ ನೀಡುವುದು ಹಾಗೂ ಅಗಸ್ಟ್ ಒಳಗೆ 360 ಘಟಕಗಳಿಂದ ಆಮ್ಲಜನಕ ಉತ್ಪಾದನೆ ಸೇರಿ 2,800 ಟನ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ ಎನ್ ಅಶ್ವತ್ಥ್ ನಾರಾಯಣ ಹೇಳಿದರು.
ವಿಕಾಸಸೌಧದಲ್ಲಿ ಇಂದು ಸಂಜೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ಲಸಿಕೆ ಹಾಕಿಸುವ ಹೊಣೆ ಕೊಡಲಾಗಿದೆ. ಪರಿಣಾಮಕಾರಿಯಾಗಿ ಲಸಿಕೆ ಕಾರ್ಯ ಮಾಡುತ್ತಿದ್ದು, ನಾವು ದೇಶದಲ್ಲಿ ಮೂರನೇ ಸ್ಥಾನದಲ್ಲಿದ್ದೇವೆ ಎಂದರು.
ಆಕ್ಸಿಜನ್ ಉತ್ಪಾದನೆ & ಸಂಗ್ರಹ :ಎರಡನೇ ಅಲೆಯ ಸಂಕಷ್ಟ ದೃಷ್ಟಿಯಲ್ಲಿ ಇಟ್ಟುಕೊಂಡು ಮೂರನೇ ಅಲೆಗೆ ಸರ್ವ ಸನ್ನದ್ಧವಾಗಿದೆ ಸರಕಾರ. ಆಮ್ಲಜನಕ ಕೊರತೆ ಆಗದಂತೆ ಕಟ್ಟೆಚ್ಚರವಹಿಸಿದೆ. ಈ ಹಿನ್ನೆಲೆ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದೆ. ಸದ್ಯಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ (ಸರಕಾರಿ & ಖಾಸಗಿ) ಇಲಾಖೆಗಳ ವ್ಯಾಪ್ತಿಯಲ್ಲಿ 400 ಮೆಟ್ರಿಕ್ಟನ್ ಆಮ್ಲಜನಕ ಉತ್ಪಾದನೆ ಆಗುವುದಿದೆ.
ಕೆಲವೆಡೆ ಈಗಾಗಲೇ ಉತ್ಪಾದನೆ ಆಗುತ್ತಿದ್ದರೆ, ಇನ್ನು ಕೆಲವೆಡೆ ಘಟಕಗಳನ್ನು ಅಳವಡಿಸಲಾಗುತ್ತಿದೆ. ಇನ್ನು, ಕೇಂದ್ರ ಸರಕಾರ, ಪಿಎಂ ಕೇರ್, ಸಿಎಸ್ಆರ್ ಹಾಗೂ ರಾಜ್ಯ ಸರಕಾರ ಖರೀದಿ ಮಾಡಿರುವ 40 ಸೇರಿ 187 ಆಮ್ಲಜನಕ ಘಟಕಗಳನ್ನು ಆರೋಗ್ಯ ಇಲಾಖೆಗೆ ನೀಡಲಾಗಿದೆ. ಇವುಗಳ ಅಳವಡಿಕೆ ಕಾರ್ಯ ವಿವಿಧ ಹಂತಗಳಲ್ಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಕೆಲ ಘಟಕಗಳು ಈ ತಿಂಗಳ ಒಳಗಾಗಿ ಉತ್ಪಾದನೆ ಆರಂಭಿಸುವುದಿದೆ. ಉಳಿದವು ಆಗಸ್ಟ್ನಲ್ಲಿ ಪೂರ್ಣ ಉತ್ಪಾದನೆ ಶುರು ಮಾಡಲಿವೆ. ವೈದ್ಯಕೀಯ ಶಿಕ್ಷಣ ಇಲಾಖೆಗೆ ಕೇಂದ್ರವು ನೀಡಿರುವ 17 ಸೇರಿ ಸಿಎಸ್ಆರ್ನಿಂದ ಬಂದಿರುವುದು ಸೇರಿ 40 ಆಕ್ಸಿಜನ್ ಜನರೇಟರ್ಗಳಿವೆ. ಇದಲ್ಲದೆ, ರಾಜ್ಯ ಸರಕಾರ 35 ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಆಕ್ಸಿಜನ್ ಜನರೇಟರ್ಗಳ ಅಳವಡಿಕೆ ಮತ್ತು ಸಂಗ್ರಹಕ್ಕೆ ಆರ್ಥಿಕ ನೆರವು ನೀಡಲಾಗಿದೆ.
ಇಲ್ಲಿಯೂ ಕೂಡ ಆಗಸ್ಟ್ನಿಂದಲೇ ಆಮ್ಲಜನಕ ಉತ್ಪಾದನೆಯಾಗಲಿದೆ. ಒಟ್ಟು 360 ಘಟಕಗಳಿಂದ ಆಮ್ಲಜನಕ ಲಭ್ಯವಾಗಲಿದೆ. ಜತೆಗೆ, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಿಪತ್ತು ಪರಿಹಾರ ನಿಧಿ, ಸಿಎಸ್ಆರ್ ನೆರವು ಇತ್ಯಾದಿಗಳಿಂದ ಘಟಕಗಳನ್ನು ಹಾಕಲಾಗಿದೆ. ಬುಧವಾರದ ಹೊತ್ತಿಗೆ ಆ ಮಾಹಿತಿ ಸಿಗುತ್ತದೆ. ರಾಜ್ಯದಲ್ಲಿ ನಿಖರವಾಗಿ ಎಷ್ಟು ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದನೆ ಆಗುತ್ತದೆ ಎಂಬುದನ್ನು ತಿಳಿದುಕೊಂಡು ಮತ್ತಷ್ಟು ಕ್ರಮವಹಿಸಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ಆಮ್ಲಜನಕ ಸಂಗ್ರಹಕ್ಕೂ ಕ್ರಮ :ಆಮ್ಲಜಕನ ಉತ್ಪಾದನೆ ಜತೆಗೆ ಅದರ ಅತ್ಯುತ್ತಮ ಸಂಗ್ರಹಣಾ ವ್ಯವಸ್ಥೆಗೂ ಆದ್ಯತೆ ನೀಡಲಾಗಿದೆ ಎಂದ ಡಿಸಿಎಂ, ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲೇ 1806 ಮೆಟ್ರಿಕ್ ಟನ್ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 500 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೆಚ್ಚುವರಿ ಸಂಗ್ರಹ ಮಾಡುವ ಗುರಿ ಇದೆ. ಅದಕ್ಕೆ ಬೇಕಾದ ಎಲ್ಲ ಕ್ರಮವನ್ನು ಈಗಾಗಲೇ ವಹಿಸಲಾಗಿದೆ. ಆಗಸ್ಟ್ ತಿಂಗಳೊಳಗೆ ಇದೆಲ್ಲ ಪೂರ್ಣವಾಗಿ ಅನುಷ್ಠಾನಕ್ಕೆ ಬರಲಿದೆ ಎಂದರು.
ಜಾಗತಿಕ ಟೆಂಡರ್ :ಆರೋಗ್ಯ ಇಲಾಖೆಯಲ್ಲಿ 1806 ಟನ್ ಸಂಗ್ರಹ ಸಾಮರ್ಥ್ಯದ ಯೋಜನೆಗೆ ಹಣಕಾಸು ಇಲಾಖೆಯ ಒಪ್ಪಿಗೆ ಸಿಕ್ಕ ಕೂಡಲೇ ಜಾಗತಿಕ ಟೆಂಡರ್ ಕರೆಯಲಾಗುವುದು. ನಮ್ಮ ದೇಶದಲ್ಲಿ ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್ಗಳನ್ನು ತಯಾರಿಸುವ ಎರಡೇ ಕಂಪನಿಗಳಿರುವ ಕಾರಣಕ್ಕೆ ಗ್ಲೋಬಲ್ ಟೆಂಡರ್ ಕರೆಯಲಾಗುವುದು ಎಂದು ಡಿಸಿಎಂ ಹೇಳಿದರು. ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ತಲಾ 6 ಮೆಟ್ರಿಕ್ ಟನ್ ಹಾಗೂ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ತಲಾ 20 ಮೆಟ್ರಿಕ್ ಟನ್ ಸಂಗ್ರಹ ಮಾಡುವ ಗುರಿ ಇದೆ. ಕೆಲ ಮೆಡಿಕಲ್ ಕಾಲೇಜ್ಗಳಲ್ಲಿ 40-50 ಮೆ.ಟನ್ ಸಂಗ್ರಹ ಸಾಮರ್ಥ್ಯವುಳ್ಳ ಆಕ್ಸಿಜನ್ ಟ್ಯಾಂಕರ್ಗಳಿವೆ.
ಇಂಥ ಟ್ಯಾಂಕರ್ಗಳನ್ನು ತಯಾರಿಸಲು ಈ ಟೆಂಡರ್ ಕರೆಯಲಾಗುತ್ತಿದೆ. ಈ ಎಲ್ಲ ಲೆಕ್ಕದಂತೆ 2,500-2,800 ಟನ್ ಆಕ್ಸಿಜನ್ ಸಂಗ್ರಹ ಮಾಡುವ ವ್ಯವಸ್ಥೆ ರಾಜ್ಯದಲ್ಲಿ ಆಗಲಿದೆ. ಜತೆಗೆ ಜಂಬೋ ಮತ್ತು ಡ್ಯೂರಾ ಸಿಲಿಂಡರ್ಗಳ ಮೂಲಕ 45 ಟನ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯ ಮಾಡಿಕೊಳ್ಳಲು ಕ್ರಮವಹಿಸಲಾಗಿದೆ. ಅಲ್ಲದೆ, 9 ಜಿಲ್ಲೆಗಳಲ್ಲಿ ಆಕ್ಸಿಜನ್ ರೀ ಫಿಲ್ಲಿಂಗ್ ಸೌಲಭ್ಯ ಇಲ್ಲ, ಅದನ್ನೂ ಮಾಡಲಾಗುತ್ತಿದೆ. ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲೇ ಆಕ್ಸಿಜನ್ ಸಂಗ್ರಹ ಘಟಕಗಳಿಲ್ಲ. ಕೂಡಲೇ ಅಳವಡಿಸಿಕೊಳ್ಳಬೇಕು ಎಂದು ಸರಕಾರ ನೋಟಿಸ್ ಜಾರಿ ಮಾಡಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಆಕ್ಸಿಜನ್ ಬೆಡ್ ಸಂಖ್ಯೆಯೂ ಹೆಚ್ಚಳ :ರಾಜ್ಯದಲ್ಲಿ ಈಗ 58,000 ಆಕ್ಸಿಜನ್ ಬೆಡ್ಗಳಿವೆ. ಈ ಪ್ರಮಾಣವನ್ನು 84,000ಕ್ಕೆ ಹೆಚ್ಚಿಸಲು ಕ್ರಮವಹಿಸಲಾಗಿದೆ. ಜತೆಗೆ, ಎಲ್ಲ ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಐಸಿಯು ಘಟಕಗಳನ್ನು ಆದ್ಯತೆಯ ಮೇರೆಗೆ ಅಳವಡಿಸಲಾಗುತ್ತಿದೆ ಎಂದರು.