ಬೆಂಗಳೂರು: ಕೊರೊನಾದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಬಹುತೇಕ ಐ.ಟಿ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ನೀಡಲಾಗಿತ್ತು. ಆದರೆ, ಇದೀಗ ಕೊರೊನಾ ಕೊಂಚ ಕಡಿಮೆಯಾಗುತ್ತಿರುವುದರಿಂದ ಮತ್ತೆ ಉದ್ಯೋಗಿಗಳನ್ನು ಆಫೀಸ್ಗೆ ಬರಲು ಹಲವು ಕಂಪನಿಗಳು ಸೂಚಿಸುತ್ತಿವೆ.
18 ತಿಂಗಳ ವರ್ಕ್ ಫ್ರಂ ಮುಕ್ತಾಯಗೊಳಿಸಲು ಸೂಚನೆ: ಭಾರತದ ಬೃಹತ್ ಟೆಕ್ ಕಂಪನಿಗಳಲ್ಲಿ ಒಂದಾದ ಮತ್ತು ನಗರದಲ್ಲಿ ಕೆಂದ್ರ ಕಚೇರಿ ಹೊಂದಿರುವ ವಿಪ್ರೋ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಆಫೀಸಿಗೆ ಬರಲು ಈ ವಾರದಿಂದ ಸೂಚಿಸುತ್ತಿದೆ. 18 ತಿಂಗಳ ವರ್ಕ್ ಫ್ರಂ ಹೋಂ ಮುಗಿಸಿ ವಿಪ್ರೋ ಉದ್ಯೋಗಿಗಳು ಸೋಮವಾರದಿಂದ ಹಂತ ಹಂತವಾಗಿ ಕಚೇರಿಗೆ ಬರುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಎರಡೂ ಡೋಸ್ ಕೊರೊನಾ ಲಸಿಕೆ ಕಡ್ಡಾಯ:ಎರಡೂ ಡೋಸ್ ಕೊರೊನಾ ಲಸಿಕೆ ಪಡೆದ ವಿಪ್ರೋ ಉದ್ಯೋಗಿಗಳಿಗೆ ಮಾತ್ರ ಆಫೀಸಿಗೆ ಬರಲು ಸೂಚಿಸಲಾಗಿದೆ. ವಾರಪೂರ್ತಿ ಅವರು ಆಫೀಸಿಗೆ ಬರಬೇಕೆಂದೇನೂ ಇಲ್ಲ. ವಿಪ್ರೋದ ಉದ್ಯೋಗಿಗಳು ವಾರದಲ್ಲಿ ಎರಡು ದಿನ ಆಫೀಸಿಗೆ ಬಂದು ಕೆಲಸ ಮಾಡಬೇಕು. ಆದರೆ, ಉದ್ಯೋಗಿಗಳು ಎರಡು ಡೋಸ್ ಕೊವಿಡ್ ಲಸಿಕೆ ಹಾಕಿಸಿಕೊಂಡಿರುವುದು ಕಡ್ಡಾಯ ಎಂದಿದೆ.
ವಿಪ್ರೊ ಮುಖ್ಯಸ್ಥ ರಿಷದ್ ಪ್ರೇಮ್ಜಿ ಮಾಹಿತಿ: ಈ ಬಗ್ಗೆ ವಿಪ್ರೋ ಚೇರ್ಮನ್ ರಿಷದ್ ಪ್ರೇಮ್ಜಿ ಮಾಹಿತಿ ನೀಡಿದ್ದು, 18 ತಿಂಗಳ ಬಳಿಕ ವಿಪ್ರೋದ ಉದ್ಯೋಗಿಗಳು ಆಫೀಸಿಗೆ ಬರುತ್ತಿದ್ದಾರೆ. ವಾರದಲ್ಲಿ ಎರಡು ದಿನ ಆಫೀಸಿನಿಂದ ಕೆಲಸ ಮಾಡಲಿದ್ದಾರೆ. ಉಳಿದ ಮೂರು ದಿನ ವರ್ಕ್ ಫ್ರಂ ಹೋಂ ಇರಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಕೊವಿಡ್ ಲಸಿಕೆಯನ್ನೂ ಹಾಕಿಸಲಾಗಿದೆ ಎಂದು ಹೇಳಿದ್ದಾರೆ.
ಆಫೀಸ್ಗಳಲ್ಲಿ ಕೊವಿಡ್ ನಿಯಮಾವಳಿಗಳನ್ನು ಯಾವ ರೀತಿ ಜಾರಿಗೊಳಿಸಲಾಗಿದೆ ಎಂಬುದರ ಬಗ್ಗೆ ಕೂಡ ವಿಡಿಯೋವನ್ನು ವಿಪ್ರೊ ಸಂಸ್ಥೆ ಹಂಚಿಕೊಂಡಿದೆ.