ಬೆಂಗಳೂರು:ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಸೋಮವಾರದಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಲಿದ್ದು, ಆಡಳಿತ-ಪ್ರತಿಪಕ್ಷಗಳ ನಡುವಿನ ಜಂಗಿಕುಸ್ತಿಗೆ ವೇದಿಕೆಯಾಗುವ ಸೂಚನೆ ದೊರೆತಿದೆ.
ಪ್ರತಿಪಕ್ಷದ ನಾಯಕರಿಲ್ಲದೆ ಶಕ್ತಿಹೀನವಾಗಿದ್ದ ಬಿಜೆಪಿ ಇದೀಗ ಆರ್.ಅಶೋಕ್ ನಾಯಕತ್ವದಲ್ಲಿ ಕಲರವ ಮಾಡಲಿದ್ದು, ಜೆಡಿಎಸ್ ಜೊತೆಗಿನ ಮೈತ್ರಿ ಖಚಿತವಾಗಿರುವುದರಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೊತೆ ಸೇರಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬೀಳಲಿದೆ. ಸರ್ಕಾರದ ವಿರುದ್ಧ ಹೋರಾಡುವ ಸಂಬಂಧ ಶುಕ್ರವಾರ ಆರ್.ಅಶೋಕ್ ನಿವಾಸದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸುದೀರ್ಘ ಚರ್ಚೆ ನಡೆಸಿದ್ದು, ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧದ ಹೋರಾಟಕ್ಕೆ ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ಬತ್ತಳಿಕೆಯಲ್ಲಿ ಭದ್ರಪಡಿಸಿಕೊಂಡಿದ್ದಾರೆ.
ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವಿಷಯದಲ್ಲಿ ಆಗುತ್ತಿರುವ ಲೋಪಗಳ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಿವರವಾಗಿ ಚರ್ಚಿಸಲಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿದ್ದಾರೆ.
ಗ್ಯಾರಂಟಿ ಯೋಜನೆಗಳ ಭರಾಟೆಯಲ್ಲಿ ಉಚಿತ ವಿದ್ಯುತ್ ನೀಡುತ್ತಿರುವ ಸರ್ಕಾರ, ಕರ್ನಾಟಕ ಪವರ್ ಕಾರ್ಪೊರೇಷನ್ ಎದುರಿಸುತ್ತಿರುವ ದುಸ್ಥಿತಿಯನ್ನು ಗಮನಿಸುತ್ತಿಲ್ಲ. ಅದಕ್ಕೆ ನೀಡಬೇಕಾದ ಇಪ್ಪತ್ತೊಂದು ಸಾವಿರ ಕೋಟಿ ರೂಪಾಯಿಗಳ ಬಾಕಿಯನ್ನು ಪಾವತಿಸುತ್ತಿಲ್ಲ. ಪರಿಣಾಮ, ಅದು ವಿದ್ಯುತ್ ಉತ್ಪಾದಿಸುತ್ತಿರುವ ಮಹತ್ವದ ಆಣೆಕಟ್ಟುಗಳನ್ನು ಅಡವಿಟ್ಟು ಸಾಲ ಪಡೆದಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದ್ದು, ಈ ವಿಷಯ ಸರ್ಕಾರದ ವಿರುದ್ಧ ಬ್ರಹ್ಮಾಸ್ತ್ರವಾಗಿ ಬಳಕೆಯಾಗುವುದು ನಿಶ್ಚಿತ.
ಇದೇ ರೀತಿ ಸರ್ಕಾರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿರುವ ಗುತ್ತಿಗೆದಾರರ ಬಳಿ ಕಮಿಷನ್ ಪಡೆಯುವ ಚಾಳಿ ಸರ್ಕಾರದಿಂದ ಅವ್ಯಾಹತವಾಗಿ ನಡೆದಿದ್ದು, ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಪ್ರತಿಪಕ್ಷಗಳು ಸರ್ಕಾರವನ್ನು ಒತ್ತಾಯಿಸಲಿವೆ. ಈ ಮಧ್ಯೆ, ರಾಜ್ಯಾದ್ಯಂತ ಹೊಸ ಯೋಜನೆಗಳನ್ನು ಜಾರಿ ಮಾಡುವುದಿರಲಿ, ಈಗಾಗಲೇ ಮಂಜೂರಾಗಿರುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಹಿಂಜರಿಯುತ್ತಿದ್ದು, ಇದು ರಾಜ್ಯದ ಅಭಿವೃದ್ಧಿಗೆ ಮಾರಕ ಬೆಳವಣಿಗೆ ಎಂಬುದು ಪ್ರತಿಪಕ್ಷಗಳ ನೇರ ಆರೋಪ.
ಸರ್ಕಾರದ ಈ ನಿಲುವಿನಿಂದಾಗಿ ಅದಾಗಲೇ ಬಹುತೇಕ ಪೂರ್ಣಗೊಂಡ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಹಾಗೆಯೇ, ಶಾಸಕರಿಗೆ ಸೂಕ್ತ ಅನುದಾನ ನೀಡುವ ವಿಷಯದಲ್ಲಿ ಸರ್ಕಾರ ಆಸಕ್ತಿ ತೋರದ ಹಿನ್ನೆಲೆ ಆಡಳಿತ-ಪ್ರತಿಪಕ್ಷಗಳ ಶಾಸಕರು ತತ್ತರಿಸಿದ್ದು, ತಮ್ಮ ತಮ್ಮ ಕ್ಷೇತ್ರಗಳ ಮತದಾರರ ಬಳಿ ಹೋಗಲು ಹಿಂಜರಿಯುವಂತಾಗಿದೆ. ಆಡಳಿತ ಪಕ್ಷದ ಹಲವು ಮಂದಿ ಶಾಸಕರು ನಮ್ಮ ಕ್ಷೇತ್ರಗಳಲ್ಲಿ ಸಂಚರಿಸುವುದು ಕಷ್ಟವಾಗುತ್ತಿದ್ದು, ಇದಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗದಿರುವುದೇ ಕಾರಣ ಎನ್ನುತ್ತಿದ್ದಾರೆ ಎಂಬುದು ಪ್ರತಿಪಕ್ಷಗಳ ವಾದ.