ಬೆಂಗಳೂರು:ಉತ್ತರಪ್ರದೇಶ ಸರ್ಕಾರ ಲವ್ ಜಿಹಾದ್ ತಡೆ ಕಾನೂನು ಜಾರಿಗೆ ತಂದ ಬೆನ್ನಲ್ಲೇ ದೇಶಾದ್ಯಂತ ಧಾರ್ಮಿಕ ಮತಾಂತರ ತಡೆಯುವ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇತ್ತ ಕರ್ನಾಟಕದಲ್ಲೂ ಲವ್ ಜಿಹಾದ್ ತಡೆ ಕಾನೂನು ಜಾರಿಗೆ ತರುವ ಬಗ್ಗೆ ಮಾತು ಕೇಳಿ ಬಂದಿತ್ತು. ಗೃಹ ಸಚಿವರು ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಮುಂದಿನ ತಿಂಗಳು ನಡೆಯುವ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡಿಸುವ ಯಾವುದೇ ಪ್ರಸ್ತಾಪ ಇಲ್ಲ ಎನ್ನಲಾಗ್ತಿದೆ.
ಡಿ. 7ರಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ ಮಾಡುವ ಯಾವುದೇ ಪ್ರಸ್ತಾವನೆಯನ್ನು ಗೃಹ ಇಲಾಖೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಗೆ ಸಲ್ಲಿಸಿಲ್ಲ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಗೆ ಈ ಸಂಬಂಧ ಪ್ರಸ್ತಾವನೆಯನ್ನು ಸಲ್ಲಿಸಿಲ್ಲ ಎಂಬ ಮಾಹಿತಿಯನ್ನು ಸಂಸದೀಯ ವ್ಯವಹಾರಗಳ ಇಲಾಖೆ ಅಧಿಕಾರಿಗಳು ನೀಡಿದ್ದಾರೆ.
ಒಂದು ವೇಳೆ ಸರ್ಕಾರ ಉತ್ತರ ಪ್ರದೇಶ ಮಾದರಿಯಲ್ಲಿ ಧಾರ್ಮಿಕ ಮತಾಂತರ ತಡೆಯುವ ಕಾನೂನು ಜಾರಿಗೆ ತರಬೇಕೆಂದಿದ್ದರೆ, ಈಗಾಗಲೇ ಕಾನೂನು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕಾಗಿತ್ತು. ಅದಕ್ಕೆ ಬೇಕಾಗಿರುವ ಪೂರಕ ಸಿದ್ಧತೆಗಳು, ರಾಜ್ಯದಲ್ಲಿ ದಾಖಲಾದ ಲವ್ ಜಿಹಾದ್ ಪ್ರಕರಣಗಳು, ಕೋರ್ಟ್ ಮೆಟ್ಟಿಲೇರಿದ ಪ್ರಕರಣಗಳ ಮಾಹಿತಿ ಸಂಗ್ರಹಿಸಿ ಕಾನೂನು ರೂಪಿಸಲು ಪ್ರಸ್ತಾಪವನ್ನು ಕಾನೂನು ಇಲಾಖೆಗೆ ಕಳುಹಿಸಬೇಕಿತ್ತು. ಜೊತೆಗೆ ಕಾನೂನು ಇಲಾಖೆ ಅದನ್ನು ರಾಜ್ಯ ಕಾನೂನು ಆಯೋಗ ಅಥವಾ ರಾಷ್ಟ್ರೀಯ ಕಾನೂನು ಶಾಲೆಗೆ ರವಾನಿಸಿ ಸೂಕ್ತ ಕಾನೂನು ರೂಪಿಸಲು ಸೂಚಿಸಬೇಕಾಗಿದೆ. ಆದರೆ ಈವರೆಗೆ ಅಂತಹ ಪ್ರಸ್ತಾವನೆಗಳಾಗಲಿ, ಟಿಪ್ಪಣಿಗಳಾಗಲಿ ಯಾವ ಇಲಾಖೆಯಿಂದಲೂ ಕಾನೂನು ಇಲಾಖೆಗೆ ಸಲ್ಲಿಕೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.