ಬೆಂಗಳೂರು/ಬೆಳಗಾವಿ: ನಾಳೆಯಿಂದ ಡಿಸೆಂಬರ್ 30ರವರೆಗೆ ಕುಂದಾನಗರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಪ್ರತಿಪಕ್ಷಗಳನ್ನು ಎದುರಿಸಲು ಆಡಳಿತಾರೂಢ ಪಕ್ಷ ಬಿಜೆಪಿ ಸಿದ್ದತೆ ಮಾಡಿಕೊಂಡಿದೆ.
40 ಪರ್ಸೆಂಟ್ ಕಮೀಷನ್, ಮತದಾರರ ಪಟ್ಟಿ ಹಗರಣ ಆರೋಪ, ಗಡಿ ವಿವಾದ, ಮೀಸಲಾತಿ ಹೋರಾಟಗಳ ಜತೆಗೆ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳು, ರೈತರ ಸಮಸ್ಯೆಗಳನ್ನಿಟ್ಟುಕೊಂಡು ಪ್ರತಿಪಕ್ಷಗಳ ನಡೆಸುವ ವಾಗ್ದಾಳಿಗೆ ಆಡಳಿತದ ಬಿಜೆಪಿ ಸರ್ಕಾರ ಉತ್ತರಿಸಲು ಸಿದ್ಧವಾಗಿದೆ.
ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷ ಸನ್ನದ್ಧ:ಬೆಳಗಾವಿಯಲ್ಲಿ ಹದಿನೈದನೆಯ ವಿಧಾನಸಭೆಯ ಹದಿನಾಲ್ಕನೇ ಅಧಿವೇಶನ ಆರಂಭಗೊಳ್ಳಲಿದೆ. ಬೆಳಗ್ಗೆ 11 ಗಂಟೆಗೆ ಸದನದ ಕಲಾಪ ಆರಂಭವಾಗಲಿದೆ. ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿವೆ. ಅವುಗಳನ್ನು ಎದುರಿಸಲು ಬಿಜೆಪಿಯೂ ಸನ್ನದ್ಧವಾಗಿದೆ.
ಮತ್ತೆ ಪ್ರತಿಧ್ವನಿಸುವ 40 ಪರ್ಸೆಂಟ್:40 ಪರ್ಸೆಂಟ್ ಕಮೀಷನ್ ಆರೋಪ ಈ ಬಾರಿಯೂ ಸದನದಲ್ಲಿ ಪ್ರತಿಧ್ವನಿಸುವ ಸಾಧ್ಯತೆ ಇದೆ. ಒಂದು ವೇಳೆ ಈ ವಿಷಯದ ಮೇಲೆ ಪ್ರತಿಪಕ್ಷಗಳು ಚರ್ಚೆಗಿಳಿದಲ್ಲಿ ಸರ್ಕಾರ ಯಾವ ರೀತಿ ಪರಿಸ್ಥಿತಿ ಎದುರಿಸಬೇಕು, ಸದಸ್ಯರು ಹೇಗೆ ಸರ್ಕಾರದ ಬೆನ್ನಿಗೆ ನಿಲ್ಲಬೇಕು ಎನ್ನುವ ಕುರಿತು ಈಗಾಗಲೇ ಚರ್ಚಿಸಿ ಪ್ರತಿಪಕ್ಷಗಳ ವಿರುದ್ಧ ಪರ್ಸಂಟೇಜ್ ಆರೋಪಕ್ಕೆ ಹಿಂದಿನ ಹತ್ತಾರು ವರ್ಷಗಳ ಉದಾಹರಣೆಗಳನ್ನು ನೀಡಿ ತಕ್ಕ ತಿರುಗೇಟು ನೀಡಲು ಸಿದ್ಧತೆ ನಡೆಸಿಕೊಂಡಿದೆ.
ಗಡಿ ವಿಚಾರ ವಿಷಯ:ಗಡಿ ವಿಷಯ ಈ ಬಾರಿ ಪ್ರಮುಖ ಚರ್ಚಿತ ವಿಷಯವಾಗಲಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ ಈ ವಿಷಯದ ಚರ್ಚೆಗೆ ಹೆಚ್ಚಿನ ಮಹತ್ವ ಬದಲಿದೆ. ಈ ವಿಚಾರದಲ್ಲಿ ಸರ್ಕಾರ ತನ್ನ ನಿಲುವನ್ನು ಸದನದಲ್ಲಿ ಅಧಿಕೃತವಾಗಿ ಮತ್ತೊಮ್ಮೆ ಸ್ಪಷ್ಟಪಡಿಸುವ ಮೂಲಕ ರಾಜ್ಯದ ನೆಲ, ಜಲ, ಗಡಿ, ಭಾಷೆ ವಿಚಾರದಲ್ಲಿ ರಾಜಿಯಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲಿದೆ.
ಅಮಿತ್ ಶಾ ಸಭೆಗೆ ತರಾಟೆ ಸಂಭವ: ಮಹಾರಾಷ್ಟ್ರ ತಗಾದೆ ಕೋರ್ಟ್ ನಲ್ಲಿದ್ದು ಅಲ್ಲಿಯೇ ಇದನ್ನು ಇತ್ಯರ್ಥ ಮಾಡಿಕೊಳ್ಳುವ ಘೋಷಣೆ ಮಾಡಲಿದೆ. ಆದರೆ ಈ ವಿಷಯದಲ್ಲಿ ಇತ್ತೀಚೆಗೆ ಅಮಿತ್ ಶಾ ನಡೆಸಿದ ಸಭೆ ಕುರಿತು ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆ ತೆಗೆದುಕೊಳ್ಳಲಿವೆ. ಯಾವ ರಾಜ್ಯವೂ ಬೆಳಗಾವಿ ಹಕ್ಕು ಸಮರ್ಥಿಸಿಕೊಳ್ಳಬಾರದು ಎನ್ನುವ ಸಲಹೆಗೆ ಕಿಡಿಕಾರಲಿವೆ. ಇದನ್ನು ಸರ್ಕಾರ ಎದುರಿಸಲು ಹಿರಿಯ ಸಚಿವರಿಗೆ,ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದುಬಂದಿದೆ.