ಬೆಂಗಳೂರು: ರಾಜ್ಯದ ತೋಟಗಾರಿಕೆ ಇಲಾಖೆ, ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಹಾಗೂ ಮಂತ್ರಿಮಾಲ್ ಸಹಯೋಗದಲ್ಲಿ ನಗರದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ದ್ರಾಕ್ಷಾರಸ ಮೇಳದಲ್ಲಿ ತರಹೇವಾರಿ ವೈನ್‌ಗಳು ವೈನ್‌ಪ್ರಿಯರನ್ನು ಆಕರ್ಷಿಸಿದೆ. ಪೈನಾಪಲ್‌ನಿಂದ ತಯಾರಿಸಿದ ವೈನ್ ಈ ಬಾರಿ ಮೇಳದ ವಿಶೇಷತೆಯಾಗಿತ್ತು.
ಮಂತ್ರಿಮಾಲ್ನಲ್ಲಿ ವೈನ್ ಸುಗ್ಗಿ: ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ನಂತರ ಇದೀಗ ಮಲ್ಲೇಶ್ವರದ ಮಂತ್ರಿಮಾಲ್ನಲ್ಲಿ ವೈನ್ ಸುಗ್ಗಿ ಆರಂಭಗೊಂಡಿದೆ. ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು ಹಾಗೂ ನಿರ್ದೇಶಕ ಎಸ್.ಅಭಿಲಾಷ ಕಾರ್ತಿಕ ಅವರು, ದ್ರಾಕ್ಷಾರಸ ಮೇಳಕ್ಕೆ ಶನಿವಾರ ಚಾಲನೆ ನೀಡಿದ್ದಾರೆ. ಈ ವೇಳೆ ಯುವತಿಯರು ಸ್ಥಳದಲ್ಲೇ ದ್ರಾಕ್ಷಿ ತುಳಿದು ಸಾಂಪ್ರದಾಯಿಕ ವೈನ್ ತಯಾರಿಸಿ ಸಂಭ್ರಮಿಸಿದರು.
17 ವೈನ್ ಕಂಪನಿ: ವೈನ್ ಬೋರ್ಡ್ ವ್ಯವಸ್ಥಾಪಕ ನಿರ್ದೇಶಕ ಸೋಮು ಮಾತನಾಡಿ, ರಾಜ್ಯದ ದಾಕ್ಷಿ ಬೆಳೆಗಾರರಿಗೆ ವೈನ್ ನೀತಿ ಜಾರಿಗೊಳಿಸಿದ ನಂತರ ಉತ್ತಮ ಬೆಲೆ ಸಿಗುತ್ತಿದೆ. ರಾಜ್ಯದಲ್ಲಿ 17 ವೈನ್ ಕಂಪನಿಗಳಿದ್ದು, 4000 ಸಾವಿರ ಎಕರೆ ಪ್ರದೇಶದಲ್ಲಿ ದಾಕ್ಷಿ ಬೆಳೆ ಬೆಳೆಯುತ್ತಿದ್ದಾರೆ. ರೆಡ್ ವೈನ್, ವೈಟ್ ವೈನ್, ರೋಸ್ ವೈನ್, ಪೈನಾಪಲ್ ವೈನ್, ಹನಿಕ್ರಷ್ ವೈನ್, ಸ್ಪಾರ್ ಲೆಗ್ ವೈನ್ ಸೇರಿದಂತೆ ವಿವಿಧ ಮಾದರಿ ವೈನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಹೃದಯದ ಆರೋಗ್ಯಕ್ಕೆ ಪೂರಕ: ವೈನ್ ತಯಾರಕರು ಮಾತನಾಡಿ, ವೈನ್ ಸೇವನೆ ಹೃದಯದ ಆರೋಗ್ಯಕ್ಕೆ ಪೂರಕವಾಗಿದ್ದು, ಹೃದಯಾಘಾತ ತಪ್ಪಿಸಬಹುದಾಗಿದೆ. ಅದರಲ್ಲಿ ಔಷಧೀಯ ಗುಣವಿದೆ. ಆದರೆ ಮಧುಮೇಹಿಗಳು ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.