ಬೆಂಗಳೂರು:ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ನಮ್ಮ ಪಕ್ಷದ ಜನಪ್ರಿಯ ನಾಯಕರಾಗಿದ್ದು, ಅವರು ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಎಲ್ಲಾ ಚುನಾವಣೆ ಗೆಲ್ಲಬಹುದು ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಹೇಳಿದ್ದಾರೆ.
ಕೆ.ಬಿ.ಕೋಳಿವಾಡ, ಮಾಜಿ ಸ್ಪೀಕರ್ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿಕೆಶಿ ಕಾಂಗ್ರೆಸ್ನಲ್ಲಿರುವ ಎಲ್ಲಾ ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು. ಆಗ ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಖಂಡಿತವಾಗಿ ಗೆಲ್ಲಬಹುದು. ಅವರಿಬ್ಬರು ಪವರ್ಫುಲ್ ಲೀಡರ್ ಆಗಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರು ಈಗ ಸರಿಯಿಲ್ಲ ಅಂತಲ್ಲ ಎಂದು ಸ್ಪಷ್ಟಪಡಿಸಿದರು.
ನನಗೂ ಭಿನ್ನಾಭಿಪ್ರಾಯಗಳು ಇದ್ದವು. ಈಗ ನಾನು ಭಿನ್ನಾಭಿಪ್ರಾಯಗಳನ್ನು ಮರೆತಿದ್ದೇನೆ. ಸಿದ್ದರಾಮಯ್ಯನವರೂ ನನಗೆ ಟಿಕೆಟ್ ಕೊಡಲು ಒಪ್ಪಿದ್ದಾರೆ. ನಾವೆಲ್ಲಾ ಮಾತನಾಡಿ ಭಿನ್ನಾಭಿಪ್ರಾಯ ಮರೆತಿದ್ದೇವೆ. ಸಿದ್ದರಾಮಯ್ಯನವರ ಮನೆಗೂ ಹೋಗಿದ್ದೆ. ಅವರು ನೀವೇ ಸ್ಪರ್ಧಿಸಿ ಎಂದಿದ್ದಾರೆ ಎಂದರು.
ಉಪ ಚುನಾವಣೆಯಲ್ಲಿ 10 ಸ್ಥಾನ ಗೆಲ್ಲುತ್ತೇವೆ: ಉಪ ಚುನಾವಣೆಯಲ್ಲಿ ಕಾಂಗ್ರೆಸ್ 10 ಸ್ಥಾನಗಳಲ್ಲಿ ಹಾಗೂ ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಈ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ. ಅಲ್ಲದೆ, ಅನರ್ಹ ಶಾಸಕರ ಬಗ್ಗೆ ಈಗಾಗಲೇ ಕ್ಷೇತ್ರದಲ್ಲೂ ವಿರೋಧ ವ್ಯಕ್ತವಾಗಿದೆ. ಮುಂದೆ ಯಡಿಯೂರಪ್ಪ ರಾಜೀನಾಮೆ ಕೊಡುವ ಸಂದರ್ಭ ಬರಬಹುದು. ನಂತರ ಮಾರ್ಚ್ 2020ಕ್ಕೆ ಚುನಾವಣೆ ಬಂದರೂ ಆಶ್ಚರ್ಯ ಇಲ್ಲ ಎಂದರು.