ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣವನ್ನು ತನಿಖೆಗೆ ವಹಿಸಿದ ಬೆನ್ನಲ್ಲೇ, ಕೇಂದ್ರ ಸರ್ಕಾರದ ಭ್ರಷ್ಟಾಚಾರಗಳನ್ನು ಬಯಲು ಮಾಡಿರುವ ಸಿಎಜಿ ವರದಿ ಕುರಿತು ತನಿಖೆ ನಡೆಸುವಂತೆ ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಭಾರತ್ ಮಾಲಾ, ದ್ವಾರಕಾ ಎಕ್ಸ್‌ಪ್ರೆಸ್ ವೇನಲ್ಲಿ ನಡೆದಿರುವ ಹಗರಣಗಳ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ನರೇಂದ್ರ ಮೋದಿ ಅವರೇ, ಹಿಂದಿನ ನಿಮ್ಮ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯದ ಗುತ್ತಿಗೆದಾರರು ಮಾಡಿರುವ 40% ಕಮಿಷನ್ ಆರೋಪದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಸಮಿತಿಯನ್ನು ರಚನೆ ಮಾಡುವ ಮೂಲಕ ನಾವು ನುಡಿದಂತೆ ನಡೆದಿದ್ದೇವೆ. ನಿಮ್ಮದೇ ಸರ್ಕಾರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಿಎಜಿ ನೀಡಿರುವ ವರದಿಯ ಬಗ್ಗೆ ನೀವು ಯಾವಾಗ ತನಿಖೆ ನಡೆಸಿ 'ನಾ ಖಾವೂಂಗಾ ನಾ ಖಾನೆ ದೂಂಗಾ' ಎಂಬ ನಿಮ್ಮ ಘೋಷಣೆಗೆ ಅನುಗುಣವಾಗಿ ನುಡಿದಂತೆ ನಡೆಯುವಿರಾ? ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ಮೂಗಿನಡಿಯಲ್ಲಿಯೇ ದ್ವಾರಕಾ ಎಕ್ಸ್‌ಪ್ರೆಸ್ ಹೈವೇ ಯೋಜನೆಯಲ್ಲಿ ಪ್ರತಿ ಕಿ.ಮೀ.ಗೆ 250 ಕೋಟಿ ರೂ. ಕೊಳ್ಳೆ ಹೊಡೆಯಲಾಗಿದೆ. 5 ಟೋಲ್ ಪ್ಲಾಜಾಗಳಲ್ಲಿ 132 ಕೋಟಿ ಹಣವನ್ನು ಲೂಟಿ ಮಾಡಲಾಗಿದೆ. ನೀವು ಪದೇ ಪದೇ ಉಲ್ಲೇಖಿಸುವ 'ಆಯುಷ್ಮಾನ್ ಭಾರತ್' ಯೋಜನೆಯಲ್ಲಂತೂ ಮೃತಪಟ್ಟ ಸುಮಾರು 88,000 ಫಲಾನುಭವಿಗಳ ಹೆಸರಿನಲ್ಲಿ ಹೊಸದಾಗಿ ಬಿಲ್‌ಗಳನ್ನು ಕ್ಲೈಮ್ ಮಾಡಿ ಹಣ ನುಂಗಿ ಹಾಕಲಾಗಿದೆ ಎಂದು ಸಿಎಜಿ ವರದಿ ಮಾಡಿದೆ. ಇದರ ಬಗ್ಗೆ ತನಿಖೆ ನಡೆಸುವ ಧೈರ್ಯ ತೋರಿಸುವಿರಾ? ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೇ, ನೀವು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಅಧ್ಯಕ್ಷರೂ ಆಗಿದ್ದೀರಿ. ಭಾರತ್ ಮಾಲಾ ಯೋಜನೆಯಲ್ಲಿ ಪ್ರತಿ ಕಿ.ಮೀ.ಗೆ ರೂ.15.37 ಕೋಟಿ ಗಳಿಂದ ರೂ.32 ಕೋಟಿ ವರೆಗೆ ಹೆಚ್ಚುವರಿ ಖರ್ಚು ತೋರಿಸಲಾಗಿದೆ ಎಂದು ಸಿಎಜಿ ವರದಿ ಮಾಡಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು? ಎಂದು ಟೀಕಿಸಿದ್ದಾರೆ.