ಬೆಂಗಳೂರು: ಎಂ.ಪಿ.ಕುಮಾರಸ್ವಾಮಿಗೆ ನಾವೇನು ಕಡಿಮೆ ಮಾಡಿದ್ದೇವೆ?, ಎಲ್ಲವನ್ನೂ ಕೊಟ್ಟರೂ ರಾಜೀನಾಮೆ ಹೇಳಿಕೆ ನೀಡಿದ್ದಾರೆ. ಲಕ್ಷ್ಮಣ ಸವದಿ ಜೊತೆಗೂ ಮಾತನಾಡುವೆ. ಒಂದೆರಡು ಕಡೆ ಬಿಟ್ಟು, ಉಳಿದೆಡೆ ಸಮಸ್ಯೆ ಪರಿಹಾರವಾಗಲಿದೆ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಅಧಿಕೃತ ನಿವಾಸ ಕಾವೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಕ್ಷೇತ್ರ ಬಿಟ್ಟು ಉಳಿದೆಡೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಮೂರು-ನಾಲ್ಕು ಕಡೆ ಅಸಮಾಧಾನವಿದೆ. ಇತರ ಕ್ಷೇತ್ರಗಳ ಆಕಾಂಕ್ಷಿಗಳ ಜೊತೆ ನಾನು ಮಾತನಾಡಿ ಅಸಮಾಧಾನಿತರ ಮನವೊಲಿಸಿ ಎಲ್ಲವನ್ನೂ ಸರಿಪಡಿಸುತ್ತೇನೆ. ಪಕ್ಷದಲ್ಲಿ ಗೊಂದಲ ಉಂಟುಮಾಡಬೇಡಿ ಎಂದು ವಿನಂತಿಸುತ್ತೇವೆ ಎಂದರು.
ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ರಾಜೀನಾಮೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, ನಾವು ಅವರಿಗೆ ಏನು ಕಮ್ಮಿ ಮಾಡಿದ್ದೇವೆ?. ಎಲ್ಲವನ್ನೂ ಕೊಡಲಾಗಿದೆ. ಆದರೂ ಇಂತಹ ಹೇಳಿಕೆ ನೀಡಿದ್ದಾರೆ. ರಾಜೀನಾಮೆ ಕೊಡುವುದು ಬಹಳ ಸುಲಭ. ಹೀಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಹೇಳಿದರು.
ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ವಿಚಾರ ನನಗೆ ಗೊತ್ತಿದೆ. ಅವರ ಜೊತೆಗೂ ಮಾತುಕತೆ ನಡೆಸುತ್ತಿದ್ದೇನೆ ಎಂದರು. ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ವಿಚಾರದಲ್ಲಿಯೂ, ಈಶ್ವರಪ್ಪ ಪುತ್ರ ಕಾಂತೇಶ್ ಜೊತೆ ಮಾತುಕತೆ ನಡೆಸಲಾಗಿದೆ. ಎಲ್ಲವೂ ಸರಿಯಾಗಲಿದೆ. ಈ ಬಾರಿ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದರು.