ಕರ್ನಾಟಕ

karnataka

ETV Bharat / state

ಸಾಮಾಜಿಕ ಜಾಲತಾಣಗಳಲ್ಲಿ ಸಾಮರಸ್ಯ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ - ಈಟಿವಿ ಭಾರತ್​ ಕನ್ನಡ ನ್ಯೂಸ್

ರಾಜ್ಯದಲ್ಲಿ ಇನ್ನು ಮುಂದೆ ಅನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

By

Published : Jun 8, 2023, 10:51 PM IST

ಬೆಂಗಳೂರು : ರಾಜ್ಯದಲ್ಲಿ ಬಡವರು, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿ ಬದುಕುವ ಸನ್ನಿವೇಶ ಸೃಷ್ಟಿಯಾಗಿತ್ತು. ಇದನ್ನು ನಮ್ಮ ಸರ್ಕಾರ ಬದಲಾಯಿಸಿ, ಈ ವರ್ಗಗಳ ಜನರಲ್ಲಿ ಸುರಕ್ಷತೆಯ ಭಾವ ಮೂಡಿಸಲು ಕೆಲಸ ಮಾಡಲಿದೆ. ಈಗಾಗಲೇ ಕೆಲಸ ಪ್ರಾರಂಭವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಂದು (ಗುರುವಾರ) ತಮ್ಮನ್ನು ಭೇಟಿಯಾದ ಎದ್ದೇಳು ಕರ್ನಾಟಕ ಸಂಘಟನೆಯ ಪ್ರತಿನಿಧಿಗಳೊಂದಿಗೆ ಅವರು ಸಂವಾದ ನಡೆಸಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸಮಾಜದಲ್ಲಿ ಭೀತಿಯ ವಾತಾವರಣ ಸೃಷ್ಟಿಸುವವರು, ಸಾಮಾಜಿಕ ಜಾಲತಾಣಗಳ ಮೂಲಕ ಸಾಮರಸ್ಯ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಇನ್ನು ಮುಂದೆ ರಾಜ್ಯದಲ್ಲಿ ಅನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ ಎಂದರು.

ನಮ್ಮ ಸರ್ಕಾರವು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿದೆ. ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲಾಗುವುದು. ಇದಕ್ಕೆ ವಾರ್ಷಿಕ 59,000 ಕೋಟಿ ರೂ. ಹಣಕಾಸಿನ ಅಗತ್ಯವಿದ್ದು, ಪ್ರಸಕ್ತ ವರ್ಷದ ಬಾಕಿ ಉಳಿದ ತಿಂಗಳುಗಳಿಗೆ 41,000 ಕೋಟಿ ರೂ. ಗಳ ಅಗತ್ಯವಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮರುಪರಿಶೀಲಿಸಿ, ಹೊಸ ನೀತಿ ಜಾರಿ ಜೊತೆಗೆ ಹಲವು ಜನ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಎಂದು ಸಿದ್ದರಾಮಯ್ಯ ವಿವರಿಸಿದರು. ಈ ವೇಳೆ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಕೆ.ಎಂ.ರಾಮಚಂದ್ರಪ್ಪ, ನೂರ್ ಶ್ರೀಧರ್, ವಿಜಯಮ್ಮ, ಮಲ್ಲಿಗೆ, ಜೆ.ಎಸ್.ಪಾಟೀಲ್, ಯೂಸುಫ್ ಖನ್ನಿ, ತಾರಾರಾವ್ ಸೇರಿದಂತೆ 30ಕ್ಕೂ ಅಧಿಕ ಮಂದಿ ನಾನಾ ಸಂಘಟನೆಗಳ ಪ್ರತಿನಿಧಿಗಳು ನಿಯೋಗದಲ್ಲಿದ್ದರು.

ಪ್ರಮುಖರ ಭೇಟಿ:ಭಾರತದಲ್ಲಿ ಫ್ರಾನ್ಸ್​ ಕಾನ್ಸುಲ್ ಜನರಲ್ ಥಿಯರಿ ಬರ್ಥೆಲೊಟ್ (Thierry Berthelot) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಉಪಸ್ಥಿತರಿದ್ದರು. ಬಳಿಕ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ. ಎಂ. ಆರ್. ದೊರೆಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಧ್ಯಂತರ ವರದಿ ಸಲ್ಲಿಸಿದರು.

ಗ್ಯಾರಂಟಿ ಯೋಜನೆ ಜಾರಿ ಸಂಬಂಧ ಸರಣಿ ಸಭೆ :ಇಂದೂ ಕೂಡಸಿದ್ದರಾಮಯ್ಯ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಹಲವು ಮಹತ್ವದ ಸಭೆ ನಡೆಸಿದರು. ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ಸರ್ಕಾರಿ ನಿವಾಸದಿಂದ ಹೊರಟು ಕೃಷ್ಣಾಗೆ ಆಗಮಿಸಿದ ಸಿಎಂ ಮೊದಲು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ತಾವು ಬೆಂಗಳೂರಿನಲ್ಲಿ ಇರುವ ಸಂದರ್ಭ ನಿತ್ಯ ಜನತಾದರ್ಶನ ನಡೆಸುವುದಾಗಿ ತಿಳಿಸಿದ್ದರು. ಅದರಂತೆಯೇ ಇಂದು ಸಹ ಜನರ ಅಹವಾಲು ಆಲಿಸಿದರು. ಈ ಸಂದರ್ಭದಲ್ಲಿ ನೂರಾರು ಮಂದಿ ತಮ್ಮ ಸಮಸ್ಯೆ ಹೇಳಿಕೊಂಡರು.

ಇದನ್ನೂ ಓದಿ :ಬಾಡಿಗೆದಾರರಿಗೂ ಗೃಹಜ್ಯೋತಿ ಉಚಿತ ವಿದ್ಯುತ್.. ತೆರಿಗೆ ಪಾವತಿದಾರರಿಗಿಲ್ಲ ಗೃಹ ಲಕ್ಷ್ಮಿ ಯೋಜನೆ

ABOUT THE AUTHOR

...view details