ಬೆಂಗಳೂರು: ಬಿಯರ್ ಮತ್ತು ಇತರ ಪಾನೀಯ ತಯಾರಿಕಾ ಕಂಪೆನಿ ಎಬಿ-ಇನ್ಬೆವ್ನ ಅಧ್ಯಕ್ಷ ಹಾಗೂ ಸಿಇಓ (ಎಪಿಎಸಿ) ಜಾನ್ ಕ್ರಾಪ್ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಇನ್ನಷ್ಟು ಹೂಡಿಕೆ ಮಾಡುವ ಉತ್ಸುಕತೆ ತೋರಿದರು.
ಎಬಿ-ಇನ್ಬೆವ್ ತಯಾರಿಕಾ ಘಟಕ ಈಗಾಗಲೇ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಯು ಸುಮಾರು 500 ಕೋಟಿ ರೂ. ಹೂಡಿಕೆಯೊಂದಿಗೆ ಈ ಘಟಕವನ್ನು ವಿಸ್ತರಣೆ ಮಾಡಲು ಮುಂದಾಗಿದೆ. ರಾಜ್ಯದ ಕೈಗಾರಿಕಾ ಸೌಲಭ್ಯಗಳು ಉತ್ತಮವಾಗಿದ್ದು, ಅತ್ಯುತ್ತಮ ಅಬಕಾರಿ ನೀತಿ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಕಂಪೆನಿಯು ಇನ್ನಷ್ಟು ಹೂಡಿಕೆಯನ್ನು ರಾಜ್ಯದಲ್ಲಿ ಮಾಡಲು ಉತ್ಸುಕವಾಗಿದೆ ಎಂದು ತಿಳಿಸಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಅಗತ್ಯವಿರುವ ಎಲ್ಲ ಸಹಕಾರ ನೀಡುವುದಾಗಿಯೂ ಭರವಸೆ ನೀಡಿದರು.