ಬೆಂಗಳೂರು: ನಾಳಿನ ಕೇಂದ್ರ ಬಜೆಟ್ ಮೇಲೆ ರಾಜ್ಯದ ರೈಲ್ವೆ ಸೇವೆ, ಸೌಲಭ್ಯ ಆಕಾಂಕ್ಷಿಗಳ ನಿರೀಕ್ಷೆ ದೊಡ್ಡಮಟ್ಟದಲ್ಲಿದೆ. ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ನಡೆಯುವ ಚುನಾವಣೆಯನ್ನು ಪ್ರಮುಖವಾಗಿಟ್ಟುಕೊಂಡು ಒಂದಿಷ್ಟು ಜನಪ್ರಿಯ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಬಹುದು. ಹಳೆಯ ಯೋಜನೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ತ್ವರಿತಗೊಳಿಸಲು ಚಾಲನೆ ನೀಡಬಹುದು. ಉತ್ತಮ ಆದಾಯ ತಂದುಕೊಡುತ್ತಿರುವ ರೈಲ್ವೆ ವ್ಯವಸ್ಥೆಯ ಸುಧಾರಣೆ, ನಿಲ್ದಾಣ ಅಭಿವೃದ್ಧಿ, ರೈಲ್ವೆ ಹೊಸ ಮಾರ್ಗಗಳ ಆರಂಭ, ಹಳೆ ಮಾರ್ಗಗಳ ಉನ್ನತೀಕರಣ ಸೇರಿದಂತೆ ಹಲವು ಘೋಷಣೆಗಳ ನಿರೀಕ್ಷೆ ಇದೆ.
ರಾಜ್ಯದಲ್ಲಿ ರೈಲ್ವೆ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲವಾದರೂ, ಅಷ್ಟೊಂದು ಕಳಪೆ ಎನ್ನುವಂತಿಲ್ಲ. ಸುಮಾರು 10 ಸಾವಿರ ಕೋಟಿ ರೂ. ಮೊತ್ತದಲ್ಲಿ ರಾಜ್ಯದಲ್ಲಿ 9 ಹೊಸ ರೈಲು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೆಲವು ಯೋಜನೆಗಳ ಕಾಮಗಾರಿ ನಿಂತಿರುವುದು ನಿಜ. ಇದಕ್ಕೆ ಕಾರಣ ಭೂ ಸ್ವಾಧೀನ ಪ್ರಕ್ರಿಯೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಸಂವಹನ ಕೊರತೆಯಿಂದ ಈ ಸಮಸ್ಯೆ ಎದುರಾಗಿದೆ. ಇದೇ ಕಾರಣದಿಂದ ರಾಜ್ಯದ ಐದು ಯೋಜನೆಗಳು 10 ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಪರಿಸರಸ್ನೇಹಿಗಳ ವಿರೋಧ ಹಿನ್ನೆಲೆಯಲ್ಲೂ ಒಂದೆರಡು ಯೋಜನೆ ನಿಂತಿವೆ.
ಎಲ್ಲೆಲ್ಲಿ ರೈಲ್ವೆ ಮಾರ್ಗ ನಿರ್ಮಾಣ ಬಾಕಿ?: ಬಾಗಲಕೋಟೆ–ಕುಡಚಿ ಮಾರ್ಗ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು 2010-11ರಲ್ಲಾದರೂ, ಇದುವರೆಗೂ ಸರಿಯಾಗಿ ವ್ಯವಸ್ಥೆ ಆರಂಭವಾಗಿಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ಸಮನಾಗಿ ಅನುದಾನ ಹಂಚಿಕೊಂಡು ಯೋಜನೆ ಕೈಗೆತ್ತಿಕೊಳ್ಳಬೇಕಿತ್ತು. ಯೋಜನೆಗೆ ಬೇಕಿರುವ ಭೂಮಿಯನ್ನು ಕರ್ನಾಟಕ ಸರ್ಕಾರ ಉಚಿತವಾಗಿ ನೀಡಬೇಕು ಎಂದು ರೈಲ್ವೆ ಇಲಾಖೆ ಷರತ್ತು ವಿಧಿಸಿತ್ತು. 142 ಕಿ.ಮೀ. ಉದ್ದದ ಈ ಮಾರ್ಗದ ಆರಂಭಿಕ ಯೋಜನಾ ಮೊತ್ತ 816 ಕೋಟಿ ರೂ. ಆಗಿತ್ತು. ಅದು ಈಗ 1,530 ಕೋಟಿಗೆ ಏರಲಿದೆ ಎಂದು ಅಂದಾಜಿಸಲಾಗುತ್ತಿದೆ. ಪರಿಷ್ಕೃತ ಯೋಜನಾ ಮೊತ್ತ ಹಂಚಿಕೆ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಮತಕ್ಕೆ ಬಂದಿಲ್ಲ. ಈ ಮಾರ್ಗವನ್ನು 2016ರಲ್ಲಿ ಕಾರ್ಯಾರಂಭ ಮಾಡಬೇಕಿತ್ತು. ಈವರೆಗೆ ಈ ಕಾಮಗಾರಿಗೆ ಯೋಜನಾ ಮೊತ್ತದ ಶೇ. 25ರಷ್ಟು ವೆಚ್ಚ ಮಾಡಲಾಗಿದ್ದು, ಭೌತಿಕ ಪ್ರಗತಿ ಶೇ. 32ರಷ್ಟು ಆಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಕಾಮಗಾರಿ 2026ರ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಬಹುದು ಎಂದು ರೈಲ್ವೆ ಇಲಾಖೆ ಅಂದಾಜಿಸಿದೆ.
ಇದನ್ನೂ ಓದಿ:ಜಾಗತಿಕ ಅಸ್ಥಿರತೆಯ ನಡುವೆ ಇಡೀ ವಿಶ್ವ ಭಾರತದ ಬಜೆಟ್ ಮೇಲೆ ಕಣ್ಣಿಟ್ಟಿದೆ: ಪ್ರಧಾನಿ ಮೋದಿ