ಬೆಂಗಳೂರು: ಎಲ್ಲಾ ಮಕ್ಕಳು ಶಿಕ್ಷಣ ಪಡೆಯಬೇಕು, ಸರ್ಕಾರಿ ಶಾಲೆಗಳಿಗೆ ಹೆಚ್ಚು ಬರಬೇಕು. ಹಾಗಾಗಿ, ರಾಜ್ಯದಲ್ಲಿ ಸುಮಾರು 3ಸಾವಿರ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ವಿಕಾಸಸೌಧದಲ್ಲಿ ಇಂದು ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, 2024-25ರ ವೇಳೆಗೆ ಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಹಾಗಾಗಿ, ಗ್ರಾಮಾಂತರ ಭಾಗದಲ್ಲಿ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಮೂರು ವರ್ಷದಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಹ ಒಪ್ಪಿಗೆ ಕೊಟ್ಟಿದ್ದಾರೆ. ಸಿಎಸ್ಆರ್ ಯೋಜನೆಯಡಿ ಹಣ ಲಭ್ಯವಾಗಲಿದೆ. ಇದಕ್ಕೆ 600 ಕೋಟಿ ರೂಪಾಯಿ ಖರ್ಚು ಬರಬಹುದು. ಅಜೀಂ ಪ್ರೇಂಜಿ ಫೌಂಡೇಷನ್ ಕೂಡ ಮಾತುಕತೆ ನಡೆಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಸೌಲಭ್ಯ ಸಿಗಬಹುದು. ಮೂಲ ಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಸಿಗಬಹುದು ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕ ಪಬ್ಲಿಕ್ ಶಾಲೆಗಳ ಗುಣಮಟ್ಟ ಚೆನ್ನಾಗಿದೆ. ದೆಹಲಿಯಲ್ಲಿ ಇದು ವರ್ಕೌಟ್ ಆಗಿದೆ. ರಾಜ್ಯದಲ್ಲಿ ಎರಡು ಗ್ರಾಮ ಪಂಚಾಯಿತಿಗೆ ಒಂದು ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ 6 ಸಾವಿರ ಗ್ರಾಮ ಪಂಚಾಯಿತಿಗಳಿದ್ದು, ಕೆಲವೊಂದು ಕಡೆ ಕನ್ವರ್ಟ್ ಮಾಡುವ ಪ್ರಯತ್ನವಿದೆ. ಇರುವ ಶಾಲೆಗಳನ್ನ ಕನ್ವರ್ಟ್ ಮಾಡುವ ಚಿಂತನೆಯೂ ಇದೆ ಎಂದು ಹೇಳಿದರು.
ನಮ್ಮ ಇಲಾಖೆ ದೊಡ್ಡದು. ಅಷ್ಟೇ ಸಮಸ್ಯೆಗಳೂ ಇಲಾಖೆಯಲ್ಲಿವೆ. ಸರ್ಕಾರ ರಚನೆಯಾಗಿ ಆರು ತಿಂಗಳಾಯ್ತು. ಜಿಲ್ಲಾವಾರು ಪ್ರಗತಿ ಪರಿಶೀಲನಾ ಸಭೆ ಮಾಡಿದ್ದು, ಡಿಸೆಂಬರ್ನೊಳಗೆ ಎಲ್ಲಾ ಜಿಲ್ಲೆಗಳಲ್ಲೂ ಇದನ್ನು ಮುಗಿಸುತ್ತೇನೆ. 1 ರಿಂದ 10 ನೇ ತರಗತಿ ಹಾಗೂ ಪಿಯುಸಿವರೆಗೆ ಸಭೆ ನಡೆಸಿದ್ದೇನೆ. ಕೆಲವು ಕಾರ್ಯಕ್ರಮ ಸ್ಥಗಿತಗೊಂಡಿದ್ದವು. ವಿಧಾನಸಭೆ ಅಧಿವೇಶನ ಕೂಡ ಹತ್ತಿರವಾಗ್ತಿದೆ. ಅಷ್ಟರಲ್ಲೇ ಸಮಸ್ಯೆ ಸರಿಪಡಿಸುವ ಪ್ರಯತ್ನ ನಡೆದಿದೆ. ಪ್ರಸ್ತುತ ನನಗೆ ತೃಪ್ತಿಯನ್ನು ತಂದಿದೆ ಎಂದರು.