ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆಯೇ ದೊಡ್ಡ ಗೋಜಲಾಗಿ ಮಾರ್ಪಟ್ಟಿದೆ. ಕೋಲಾರದಲ್ಲಿ ಸ್ಪರ್ಧಿಸುವ ಸಿದ್ದರಾಮಯ್ಯ ಇಂಗಿತ ಕಡೆಯ ಕ್ಷಣದಲ್ಲಿ ವರುಣಾಗೆ ಬದಲಾದರೂ ಅಚ್ಚರಿ ಇಲ್ಲ ಎನ್ನುವ ಸಾಧ್ಯತೆ ಗೋಚರಿಸುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ನಡೆಸಿದ ಆಂತರಿಕ ವರದಿಯಲ್ಲಿ ಕಾಂಗ್ರೆಸ್ಗೆ ಅನುಕೂಲವಾಗುವ ಯಾವುದೇ ಸೂಚನೆ ಕಂಡಿಲ್ಲ ಎಂದು ಹೇಳಲಾಗುತ್ತಿದೆ.
ಕೋಲಾರದ ಆರು ಕ್ಷೇತ್ರಗಳ ಪೈಕಿ ಒಬ್ಬ ಬೆಂಬಲಿತ ಪಕ್ಷೇತರ ಶಾಸಕರ ಬೆಂಬಲ ಸೇರಿದಂತೆ ಐದು ಶಾಸಕರನ್ನು ಹೊಂದಿರುವ ಕಾಂಗ್ರೆಸ್, ಈ ಸಾರಿ ಕೆಜಿಎಫ್ ಹೊರತುಪಡಿಸಿದರೆ ಬೇರೆ ಕ್ಷೇತ್ರದಲ್ಲಿ ತೀವ್ರ ಪ್ರತಿಸ್ಪರ್ಧೆ ಎದುರಿಸಲಿದೆ. ಹಾಲಿ ಶಾಸಕರು ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಹ ಈ ಚುನಾವಣೆಯಲ್ಲಿ ಭಾರಿ ಕಸರತ್ತು ನಡೆಸಬೇಕಿದೆ ಎಂದು ಕಾಂಗ್ರೆಸ್ ಆಂತರಿಕ ವರದಿ ಬಹಿರಂಗಪಡಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕೋಲಾರ್ ಸೇಫ್ ಅಲ್ಲ: ಪಕ್ಷವನ್ನು ಅಧಿಕಾರಕ್ಕೆ ತರುವ ಮಹತ್ವದ ಜವಾಬ್ದಾರಿ ಹೊತ್ತಿರುವ ಪ್ರಮುಖ ರಾಜ್ಯ ನಾಯಕರಲ್ಲಿ ಒಬ್ಬರಾಗಿರುವ ಸಿದ್ದರಾಮಯ್ಯ ಕೋಲಾರದಿಂದ ಪ್ರತಿನಿಧಿಸಿದರೆ ಹಿಂದಿನಷ್ಟೇ ಇಲ್ಲವೇ ಎಲ್ಲಾ ಆರು ಕ್ಷೇತ್ರವನ್ನು ಗೆಲ್ಲಿಸಿಕೊಳ್ಳುವ ಗುರಿ ಎದುರಾಗಲಿದೆ. 2013ರಲ್ಲಿ ಕೋಲಾರದಲ್ಲಿ 2 ಕ್ಷೇತ್ರದಲ್ಲಷ್ಟೇ ಗೆದ್ದಿದ್ದ ಕಾಂಗ್ರೆಸ್, 2018ರಲ್ಲಿ 5 ಸ್ಥಾನ ಗೆದ್ದಿದೆ. ಮುಳಬಾಗಿಲಿನಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಕೊತ್ತೂರು ಮಂಜುನಾಥ್ ಸ್ಪರ್ಧೆ ಅನರ್ಹಗೊಂಡಾಗ ಪಕ್ಷೇತರ ಅಭ್ಯರ್ಥಿ ಹೆಚ್.ನಾಗೇಶ್ರನ್ನು ಬೆಂಬಲಿಸಿತ್ತು. ಅವರು ಗೆಲುವು ಸಾಧಿಸಿದ್ದರು.
ಉಳಿದಂತೆ ಕೆಆರ್ ರಮೇಶ್ ಕುಮಾರ್ (ಶ್ರೀನಿವಾಸಪುರ), ಎಂ. ರೂಪಕಲಾ (ಕೆಜಿಎಫ್), ಎಸ್.ಎನ್. ನಾರಾಯಣಸ್ವಾಮಿ (ಬಂಗಾರಪೇಟೆ), ಕೆ.ವೈ. ನಂಜೇಗೌಡ (ಮಾಲೂರು) ಗೆದ್ದಿದ್ದರು. ಈ ಸಾರಿ ಕಾಂಗ್ರೆಸ್ ಆಂತರಿಕ ವರದಿಯಲ್ಲಿ ಕಾಂಗ್ರೆಸ್ ಪಾಲಿಗೆ ಕೋಲಾರ ಅಷ್ಟು ಸೇಫ್ ಅಲ್ಲ ಎಂಬ ಮಾಹಿತಿ ಇದೆ. ಇನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕೋಲಾರದಿಂದ ಸ್ಪರ್ಧಿಸಿ 81,487 ಮತಗಳ ಭಾರಿ ಅಂತರದಿಂದ ಗೆದ್ದಿದ್ದ ಕೆ. ಶ್ರೀನಿವಾಸಗೌಡ ಈ ಸಾರಿ ಕಾಂಗ್ರೆಸ್ ಸೇರಿದ್ದು, ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ 6ಕ್ಕೆ 6 ಕ್ಷೇತ್ರ ಗೆಲ್ಲುವ ಸವಾಲು ಕಾಂಗ್ರೆಸ್ ಮುಂದಿರಲಿದೆ.
ವರುಣಾದಿಂದ ಸ್ಪರ್ಧಿಸುವಂತೆ ಪುತ್ರನ ಕರೆ: ಈ ಎಲ್ಲ ಬೆಳವಣಿಗೆ ಮಧ್ಯೆ ಸಿದ್ದರಾಮಯ್ಯ ಪಾಲಿಗೆ ಅತ್ಯಂತ ಸುರಕ್ಷಿತ ಕ್ಷೇತ್ರ ಎನಿಸಿಕೊಂಡಿರುವ ವರುಣಾಗೆ ಬಂದು ಸ್ಪರ್ಧಿಸುವಂತೆ ಪುತ್ರ ಡಾ. ಯತೀಂದ್ರ ಕರೆದಿದ್ದಾರೆ. ಕಡೆಯ ಕ್ಷಣದಲ್ಲಿ ಸಿದ್ದರಾಮಯ್ಯ ಇದನ್ನೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದು ಸಿದ್ದರಾಮಯ್ಯ ಅವರ ಕೊನೆಯ ಚುನಾವಣೆ. ಅವರು ಸ್ಪರ್ಧಿಸಲು ಬಯಸಿದ್ದೇ ಆದರೆ, ವರುಣಾ ಕ್ಷೇತ್ರ ಈಗಲೂ ಮುಕ್ತವಾಗಿದೆ ಎಂದು ಯತೀಂದ್ರ ಹೇಳಿಕೆ ನೀಡಿದ್ದರು.
ಇನ್ನೊಂದೆಡೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಿದ್ದರಾಮಯ್ಯ ಎಲ್ಲಿಂದ ಬೇಕಾದರೂ ಸ್ಪರ್ಧಿಸಬಹುದು, ಎಲ್ಲಿಂದ ಸ್ಪರ್ಧಿಸಿದರೂ ಇಡೀ ಕ್ಷೇತ್ರಕ್ಕೆ ಲಾಭವಾಗಲಿದೆ. ಮೈಸೂರಿನ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೆ ಇಡೀ ಜಿಲ್ಲೆ ಮತ್ತು ಅಕ್ಕಪಕ್ಕದ ಪ್ರದೇಶಗಳಿಗೆ ಲಾಭವಾಗಲಿದೆ ಎಂದು ತಿಳಿಸಿದ್ದರು. ಸಿದ್ದರಾಮಯ್ಯ ಆಪ್ತರು ಅವರು ಮೈಸೂರು ಜಿಲ್ಲೆ ಅದರಲ್ಲೂ ವರುಣಾದಿಂದಲೇ ಸ್ಪರ್ಧಿಸಲಿ ಎನ್ನುತ್ತಿದ್ದಾರೆ.