ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸಿಡಿ ಪ್ರಕರಣ ಸಂಬಂಧ ಅಜ್ಞಾತ ಸ್ಥಳದಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಾಳೆ ವಿಶೇಷ ತನಿಖಾಧಿಕಾರಿಗಳ ಮುಂದೆ ಹಾಜರಾಗುತ್ತಾರಾ? ಇಲ್ಲವಾ? ಎಂಬ ಅನುಮಾನ ಶುರುವಾಗಿದೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಯುವತಿ ನೀಡಿದ ದೂರಿನ ಮೇರೆಗೆ ಈಗಾಗಲೇ ಮೂರು ಬಾರಿ ತನಿಖಾಧಿಕಾರಿಗಳ ವಿಚಾರಣೆಗೆ ರಮೇಶ್ ಜಾರಕಿಹೊಳಿ ಹಾಜರಾಗಿದ್ದರು. ವಿಚಾರಣೆ ವೇಳೆ ಮಾಜಿ ಸಚಿವ ಜಾರಕಿಹೊಳಿಗೆ ಕೇಳಿದ ಬಹುತೇಕ ಪ್ರಶ್ನೆಗಳಿಗೆ ಉತ್ತರಿಸಲು ವಕೀಲರೊಂದಿಗೆ ಚರ್ಚಿಸಿ ಹೇಳಿಕೆ ನೀಡಲು ಕಾಲಾವಕಾಶ ಕೋರಿದ್ದರು. ಇದರಂತೆ ನಾಲ್ಕು ದಿನಗಳ ಅವಕಾಶ ನೀಡಿದ್ದ ಎಸ್ಐಟಿ ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು. ಸದ್ಯ ಅಜ್ಞಾತ ಸ್ಥಳದಲ್ಲಿದ್ದಾರೆ ಎನ್ನಲಾಗ್ತಿರುವ ಜಾರಕಿಹೊಳಿ ಶುಕ್ರವಾರ ವಿಚಾರಣೆ ಹಾಜರಾಗಬೇಕಿದೆ.
ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ನಕಲಿ ಸಿಡಿ ಎಂದು ಸರ್ಮಥಿಸಿಕೊಳ್ಳುತ್ತಿರುವ ರಮೇಶ್ ಜಾರಕಿಹೊಳಿ ಶುಕ್ರವಾರ ವಿಚಾರಣೆಗೆ ಹಾಜರಾದರೆ ಯುವತಿ ನೀಡಿರುವ ಹೇಳಿಕೆಗಳನ್ನು ಆಧರಿಸಿ ತನಿಖಾಧಿಕಾರಿಗಳು ಪ್ರಶ್ನಿಸಲಿದ್ದಾರೆ. ಸಿಆರ್ ಪಿಸಿ 164 ಹಾಗೂ 161ನಡಿ ನ್ಯಾಯಾಧೀಶರ ಹಾಗೂ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಜಾರಕಿಹೊಳಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವರು, ಇದೀಗ ಕಾನೂನು ತಜ್ಞರ ಅಭಿಪ್ರಾಯ ಪಡೆದು ತೆರೆಮರೆಯಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಚಿಂತನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ಮಾಜಿ ಸಚಿವರಿಗೆ ಮಗ್ಗಲ ಮುಳ್ಳಾಗುತ್ತಾ ಯುವತಿ ಹೇಳಿಕೆ?