ಬೆಂಗಳೂರು: ಒಂದು ಕಾಲದಲ್ಲಿ ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ, ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣೀಭೂತರಾಗಿದ್ದ ಮಾಜಿ ಸಚಿವ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಿದ್ದು, ಇದರ ವ್ಯತಿರಿಕ್ತ ಪರಿಣಾಮ ಆಡಳಿತ ಪಕ್ಷ ಬಿಜೆಪಿ ಮೇಲೆ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಹೊಸ ಪ್ರಾದೇಶಿಕ ಪಕ್ಷದ ಘೋಷಣೆ ಮಾಡುವಾಗ ಜನಾರ್ದನ ರೆಡ್ಡಿ ಅವರು ಭಾರತೀಯ ಜನತಾ ಪಕ್ಷದ ವಿರುದ್ಧ ನೇರವಾಗಿಯೇ ಕಿಡಿಕಾರಿದ್ದು, ತಮ್ಮನ್ನು ನಡೆಸಿಕೊಂಡ ರೀತಿ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮುಖಂಡರು ತಮ್ಮನ್ನು ಸರಿಯಾಗಿ ಬಳಸಿಕೊಳ್ಳದಿರುವ ಕುರಿತು ಅಸಮಾಧಾನ ಹೊರಹಾಕಿರುವುದನ್ನು ಗಮನಿಸಿದರೆ ಬಿಜೆಪಿ ವಿರುದ್ಧವೇ ಪ್ರಾದೇಶಿಕ ಪಕ್ಷವನ್ನು ಕಟ್ಟಿದಂತೆ ಮೇಲ್ನೋಟಕ್ಕೆ ಭಾಸವಾಗುತ್ತಿದೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ಪ್ರಾದೇಶಿಕ ಪಕ್ಷ ಕಟ್ಟುವ ಮೂಲಕ ಬಿಜೆಪಿಗೆ ಪಂಥಾಹ್ವಾನ ನೀಡಿದ್ದಾರಾ..? ಅಥವಾ ಬಿಜೆಪಿಗೆ ಇದರಿಂದ ಲಾಭವಾಗಲಿದೆಯಾ ...? ಎನ್ನುವುದನ್ನು ಖಚಿತವಾಗಿ ಹೇಳಲು ಕಾಲವಿನ್ನೂ ಪಕ್ವವಾಗಿಲ್ಲ ಎಂದು ರಾಜ್ಯ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಹಿರಿಯ ರಾಜಕೀಯ ವಿಶ್ಲೇಷಕ ಎಂ. ಸಿದ್ಧರಾಜು ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿದ ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸ್, ಎಸ್ ಬಂಗಾರಪ್ಪ, ಬಿ.ಎಸ್. ಯಡಿಯೂರಪ್ಪ ಅವರಾರು ಯಶಸ್ಸು ಕಾಣದೇ ವಿಫಲರಾಗಿದ್ದಾರೆ. ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದವರು ಹುಟ್ಟುಹಾಕಿದ ಪ್ರಾದೇಶಿಕ ಪಕ್ಷಗಳಿಗೇ ಮತದಾರರ ಮನ್ನಣೆ ದೊರೆಯದೇ ಇದ್ದಾಗ ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಗಟ್ಟಿಯಾಗಿ ನೆಲೆಯೂರುವ ಬಗ್ಗೆ ಎಂ ಸಿದ್ಧರಾಜು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿಗೆ ಗುಡ್ ಬೈ ಹೇಳಿ ಆ ಪಕ್ಷದಿಂದಲೇ ಹೊರಬಂದು ಜನಾರ್ದನ ರೆಡ್ಡಿ ಪ್ರತ್ಯೇಕ ಪ್ರಾದೇಶಿಕ ಪಕ್ಷ ಸ್ಥಾಪಿಸಿದ್ದು, ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ಕಣಕ್ಕಿಳಿಯಲು ಜನಾರ್ದನ ರೆಡ್ಡಿ ವೇದಿಕೆ ಸಿದ್ಧ ಪಡಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಹೈದರಾಬಾದ್ ಕರ್ನಾಟಕದಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿರುವುದು ಸ್ಪಷ್ಟವಾಗುತ್ತಿದೆ.
ಇದನ್ನೂ ಓದಿ:ಜನಾರ್ದನ ರೆಡ್ಡಿ ಪಕ್ಷದಿಂದ ಕಾಂಗ್ರೆಸ್ಗೆ ಲಾಭವಾಗುತ್ತೋ ನಷ್ಟವಾಗುತ್ತೋ ಮುಂದೆ ಗೊತ್ತಾಗಲಿದೆ: ಸತೀಶ್ ಜಾರಕಿಹೊಳಿ