ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅಂಬಾನಿ, ಅದಾನಿಯಂತಹ ಉದ್ಯಮಿಗಳು ಮುಂದೆ ಬಂದರೂ ಅವರಿಗೆ ಜಾಗ ಕೊಡುತ್ತೇವೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಂಬಾನಿ ಮತ್ತು ಅದಾನಿ ಕೂಡಾ ಉದ್ಯಮಿಗಳು. ಅವರು ಉದ್ಯಮ ಸ್ಥಾಪಿಸಲು ಮುಂದೆ ಬಂದರೆ ನಮ್ಮ ಕೈಗಾರಿಕಾ ನೀತಿಯ ಅಡಿ ಏನು ಕೊಡಬೇಕೋ ಅದನ್ನೆಲ್ಲ ಕೊಡುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬಂದವರು ಅಲೆದಾಡುವ ಪರಿಸ್ಥಿತಿ ಇರಬಾರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕರ್ನಾಟಕದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲ ಮಾಡಿಕೊಡಲು ರೂಪಿಸಲಾದ ಏಕಗವಾಕ್ಷಿ ಯೋಜನೆ ಸರಿ ಇಲ್ಲ. ಈ ಏಕಗವಾಕ್ಷಿ ಯೋಜನೆಯಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದು ಒಂದೆರಡು ದಿನಗಳಲ್ಲಿ ಅದು ಲಭ್ಯವಾಗುವ ನಿರೀಕ್ಷೆ ಇದೆ. ಉಪನಗರ ರೈಲ್ವೆ ಕುರಿತು ಚರ್ಚೆ ನಡೆಸಲಾಗಿದೆ. ಇದನ್ನು ಮೈಸೂರು, ತುಮಕೂರು, ಉಲ್ಲಾಳ ಮತ್ತು ದಾಬಸ್ ಪೇಟೆವರೆಗೆ ವಿಸ್ತರಣೆ ಮಾಡುವ ಅಗತ್ಯವಿದೆ ಎಂದರು.
ಏರ್ಪೋರ್ಟ್ಗಳನ್ನು ಸರ್ಕಾರವೇ ನಿರ್ವಹಿಸಲು ಚಿಂತನೆ:ರಾಜ್ಯದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಏರ್ಪೋರ್ಟ್ಗಳನ್ನು ಖಾಸಗಿಯವರಿಗೆ ಕೊಡುವ ಬದಲು ರಾಜ್ಯ ಸರ್ಕಾರವೇ ನಿರ್ವಹಿಸಬೇಕು ಎಂದು ಯೋಚಿಸಿದ್ದೇವೆ ಎಂದು ಸಚಿವರು ಹೇಳಿದರು. ಮಹಾರಾಷ್ಟ್ರದ ಶಿರಡಿಯಲ್ಲಿರುವ ಏರ್ಪೋರ್ಟ್ ಅನ್ನು ಅಲ್ಲಿನ ಸರ್ಕಾರವೇ ನಿರ್ವಹಿಸುತ್ತಿದೆ. ನಮ್ಮ ರಾಜ್ಯದಲ್ಲೂ ಇದೇ ಮಾರ್ಗ ಅನುಸರಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದರು.