ಬೆಂಗಳೂರು: ವಿಧಾನಸಭಾ ಚುನಾವಣೆ ಸನಿಹವಾಗುತ್ತಿದ್ದು ರಾಜ್ಯ ಬಿಜೆಪಿಯಲ್ಲಿ ಜನನಾಯಕನಾಗಿ ವರ್ಚಸ್ಸು ಹೊಂದಿದ ನಾಯಕ ಸಿಗದೆ, ಮಾಸ್ ಲೀಡರ್ ಕೊರತೆ ಕಾಡತೊಡಗಿದೆ. ಕೇವಲ ಪ್ರಧಾನಿ ಮೋದಿ ಹೆಸರಿನಿಂದ ರಾಜ್ಯದಲ್ಲಿ ಅಧಿಕಾರಕ್ಕೇರುವುದು ಕಷ್ಟ ಎನ್ನುವುದನ್ನು ಮನವರಿಕೆ ಮಾಡಿಕೊಂಡಿರುವ ವರಿಷ್ಠರು ಇದೀಗ ಮತ್ತೊಮ್ಮೆ ಯಡಿಯೂರಪ್ಪ ಲೀಡರ್‌ಶಿಪ್‌ಗೆ ಮಣೆಹಾಕಲು ಮುಂದಾಗಿದ್ದಾರೆ. ಪ್ರಚಾರ ಸಮಿತಿಗೆ ಯಡಿಯೂರಪ್ಪ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿ ಚುನಾವಣಾ ಪ್ರಚಾರ ಕಣಕ್ಕೆ ಚಾಲನೆ ನೀಡುವ ಚಿಂತನೆ ನಡೆಸಲಾಗಿದೆ.
ರಾಜ್ಯ ಬಿಜೆಪಿ ನಾಯಕರು ಚುನಾವಣೆಗೆ ಉತ್ಸುಕರಾಗಿದ್ದರೂ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೋಡಿ ರಾಜ್ಯದಲ್ಲಿ ಮೋಡಿ ಮಾಡುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಇಬ್ಬರು ನಾಯಕರೂ ಉತ್ತಮ ಇಮೇಜ್ ಹೊಂದಿದ್ದರೂ ಮಾಸ್ ಇಮೇಜ್ ಗಳಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿರುವುದು ವರಿಷ್ಠರಿಗೆ ಹೊಸ ಇಕ್ಕಟ್ಟು ತಂದಿದೆ.
ಸಿದ್ದರಾಮಯ್ಯ ಮಾಸ್ ಲೀಡರ್: ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇದೆ ಎನ್ನುವ ಮಾತುಗಳಿದ್ದರೂ ಅಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಭಾವಿ ರಾಜಕಾರಣಿಗಳಾಗಿದ್ದಾರೆ. ಸಿದ್ದರಾಮಯ್ಯ ಮಾಸ್ ಲೀಡರ್ ಆಗಿದ್ದರೆ ಡಿಕೆ ಶಿವಕುಮಾರ್ ಪಕ್ಷದ ನಾಯಕತ್ವವನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಇವರಿಗೆ ಇದೀಗ ಮಲ್ಲಿಕಾರ್ಜುನ ಖರ್ಗೆ ಎನ್ನುವ ರಾಜ್ಯದ ನಾಯಕರೇ ಎಐಸಿಸಿ ಅಧ್ಯಕ್ಷರಾಗಿದ್ದು, ಅವರಿಗೆ ಎಐಸಿಸಿ ಅಧ್ಯಕ್ಷರಾಗಿ ಕರ್ನಾಟಕ ಚುನಾವಣೆ ನಿಜವಾದ ಮೊದಲ ಚುನಾವಣೆಯಾಗಲಿದೆ.
ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಅವರಿಗೆ ಪೂರ್ಣ ಪ್ರಮಾಣದ ಪ್ರಚಾರಕ್ಕೆ ಅವಕಾಶ ನೀಡಲು ಸಮಯ ಸಿಕ್ಕಿರಲಿಲ್ಲ. ಹಾಗಾಗಿ ಖರ್ಗೆ ಕರ್ನಾಟಕದಲ್ಲಿ ಹೆಚ್ಚಿನ ಆಸಕ್ತಿ ವಹಿಸಲಿದ್ದು, ಸಾಂಘಿಕ ಹೋರಾಟ ನಡೆಸುವುದರಲ್ಲಿ ಅಚ್ಚರಿ ಇಲ್ಲ. ಕಾಂಗ್ರೆಸ್‌ನಲ್ಲಿ ಸಿದ್ದು, ಡಿಕೆ, ಖರ್ಗೆ ಎನ್ನುವ ಮೂರು ಶಕ್ತಿಗಳ ಸಮಾಗಮ ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊಡ್ಡ ಅಸ್ತ್ರವಾಗಲಿದೆ.
ಪ್ರಮುಖ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನಲ್ಲಿ ಪಕ್ಷದ ವರಿಷ್ಠ ಹೆಚ್.ಡಿ ದೇವೇಗೌಡ ದೊಡ್ಡ ಶಕ್ತಿಯಾಗಿದ್ದರೆ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ದೊಡ್ಡ ಮಟ್ಟದಲ್ಲಿ ಸಂಘಟನೆ ನಡೆಸುತ್ತಿದ್ದಾರೆ. ಅಲ್ಪಸಂಖ್ಯಾತ ಇಬ್ರಾಹಿಂಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದರೂ ತಾವೇ ಸ್ವತಃ ನಿಂತು ಸಂಘಟನೆಯಲ್ಲಿ ತೊಡಗಿದ್ದಾರೆ. ಪಂಚರತ್ನ ರಥ ಕಾರ್ಯಕ್ರಮದ ಮೂಲಕ ಜನರ ಬಳಿಗೆ ತೆರಳುತ್ತಿದ್ದಾರೆ.
ಪ್ರತಿಪಕ್ಷಗಳ ಪ್ರಬಲ ಚುನಾವಣಾ ತಂತ್ರಗಾರಿಕೆಗೆ ಸದ್ಯದ ಮಟ್ಟಿಗೆ ಆಡಳಿತಾರೂಢ ಬಿಜೆಪಿ ನಾಯಕರಲ್ಲಿ ಟಕ್ಕರ್ ನೀಡಬಲ್ಲ ಶಕ್ತಿ ಬೊಮ್ಮಾಯಿ, ಕಟೀಲ್ ಜೋಡಿಗಿದೆ ಎನ್ನುವ ನಂಬಿಕೆ ವರಿಷ್ಠರಲ್ಲಿಲ್ಲ. ಹಾಗಾಗಿ ಪ್ರಧಾನಿ ಮೋದಿ ಹೆಸರನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಆದರೆ ರಾಜ್ಯದಲ್ಲಿ ಬಿಜೆಪಿಗೆ ಮಾಸ್ ಇಮೇಜ್ ಇರುವ ನಾಯಕನ ಅಗತ್ಯವಿದ್ದು, ಯಡಿಯೂರಪ್ಪ ನಂತರ ಆ ಕೊರತೆ ತುಂಬಬಲ್ಲ ನಾಯಕ ಇನ್ನೂ ಲಭ್ಯವಾಗಿಲ್ಲ. ಹಾಗಾಗಿ ಈ ಚುನಾವಣೆಗೂ ಯಡಿಯೂರಪ್ಪ ಅವರ ಶಕ್ತಿಯನ್ನೇ ಬಳಸಿಕೊಳ್ಳಲು ವರಿಷ್ಠರು ನಿರ್ಧರಿಸಿದ್ದಾರೆ. ಅದಕ್ಕಾಗಿಯೇ ಬಿಎಸ್ವೈಗೆ ಪಕ್ಷದಲ್ಲಿ ಇತ್ತೀಚೆಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ. ಮೂಲಗಳ ಪ್ರಕಾರ ಈ ಬಾರಿಯ ವಿಧಾನಸಭಾ ಚುನಾವಣೆಗೆ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಯಡಿಯೂರಪ್ಪ ಅವರನ್ನೇ ನೇಮಕ ಮಾಡಲಾಗುತ್ತದೆ ಎನ್ನಲಾಗುತ್ತಿದೆ.
ಯಡಿಯೂರಪ್ಪ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಆ ಸಮುದಾಯದ ಅಗ್ರ ನಾಯಕ. ಆದರೆ ಕೇವಲ ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪ ಸೀಮಿತವಾಗಿಲ್ಲ. ಜಾತ್ಯಾತೀತವಾಗಿ ಯಡಿಯೂರಪ್ಪ ಅವರನ್ನು ರಾಜ್ಯದ ಜನ ಒಪ್ಪುತ್ತಾರೆ ಮತ್ತು ಬೆಂಬಲಿಸುತ್ತಾರೆ. ಈ ರೀತಿಯಾಗಿ ಜಾತಿ ಮೀರಿ ಬೆಳೆದು ನಾಯಕರಾಗಿರುವ ಮತ್ತೊಮ್ಮ ನಾಯಕ ಬಿಜೆಪಿಯಲ್ಲಿ ಇಲ್ಲ. ಬೊಮ್ಮಾಯಿ ಕಾಮನ್ ಮ್ಯಾನ್ ಸಿಎಂ ಎನ್ನುವುದು ಬಿಟ್ಟರೆ ಲಿಂಗಾಯಿತ ನಾಯಕರೂ ಆಗಿಲ್ಲ. ಅಶೋಕ್, ಸೋಮಣ್ಣ ಬೆಂಗಳೂರಿಗೆ ಸೀಮಿತ. ಒಮ್ಮೆ ಸಿಎಂ ಆಗಿದ್ದರೂ ಶೆಟ್ಟರ್, ಸದಾನಂದ ಗೌಡ ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆ. ಹಿಂದುತ್ವದ ಪ್ರತಿಪಾದಕರಾದರೂ ಸಿಟಿ ರವಿಗೆ ಮಾಸ್ ಇಮೇಜ್ ಇನ್ನೂ ಬಂದಿಲ್ಲ. ಕಟೀಲ್ ರಾಜ್ಯಾಧ್ಯಕ್ಷರಾಗಿದ್ದರೂ ಕರಾವಳಿ ಅಲೆಗೆ ಸೀಮಿತವಾಗಿದ್ದಾರೆ. ಹೀಗೆ ಯಡಿಯೂರಪ್ಪ ರೀತಿಯ ಮತ್ತೊಮ್ಮ ನಾಯಕ ಹೈಕಮಾಂಡ್ ಕಣ್ಣಿಗೆ ಕಾಣುತ್ತಿಲ್ಲ. ಹಾಗಾಗಿ ಈಗ ಅನಿವಾರ್ಯವಾಗಿ ಬಿಎಸ್‌ವೈ ಇಮೇಜ್ ಅನ್ನೇ ನಂಬಿಕೊಳ್ಳುವಂತಾಗಿದೆ.