ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ. ಮಾನವ ಮನೆಯಲ್ಲಿ ಬಂಧಿಯಾದರೆ, ಕಾಡುಪ್ರಾಣಿಗಳು ಈಗ ಸರ್ವಸ್ವತಂತ್ರವಾಗಿವೆ.
ಕಾಡುಪ್ರಾಣಿಗಳ ಆವಾಸಸ್ಥಾನದ ಹೊರಗಿನ ಪ್ರದೇಶಗಳು ಶಾಂತವಾಗುತ್ತಿರುವುದರಿಂದ ಪ್ರಾಣಿಗಳು ಇನ್ನಷ್ಟು ನಿರ್ಭಯವಾಗಿ ಸಂಚರಿಸ್ತಿವೆ. ರಾಜ್ಯದ ಕಾಡುಗಳ ಸಮೀಪದ ರಸ್ತೆಗಳಲ್ಲಿ ಕಾಡು ಪ್ರಾಣಿಗಳು ನಿರ್ಭಯವಾಗಿ ಸಂಚಾರ ಮಾಡುವ ದೃಶ್ಯ ಈಗ ಕಂಡು ಬರುತ್ತಿದೆ. ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಜಿಂಕೆಗಳು ತುಂಬಾ ಸಂತಸದಿಂದ ಮುಕ್ತವಾಗಿ ಎಲ್ಲೆಂದರಲ್ಲಿ ತಿರುಗಾಡುತ್ತಿವೆ.
ಪರಿಸರ ಶಾಂತವಾದಾಗ ವನ್ಯಜೀವಿಗಳು ಸಂತೋಷವಾಗಿರುತ್ತವೆ. ಕೇವಲ ಕಾಡುಗಳಲ್ಲದೆ ಹೊರಗಿನ ಪ್ರದೇಶದಲ್ಲೂ ಮುಕ್ತವಾಗಿ ಕಾಡುಪ್ರಾಣಿಗಳು ಸಂಚರಿಸುತ್ತವೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಹೇಳಿದ್ದಾರೆ.
ಯಾವಾಗಲು ಮಾನವನ ಸಂಚಾರ ಎಲ್ಲಾ ಕಡೆ ಇರುವುದರಿಂದ ಪ್ರಾಣಿಗಳು ಕಾಡಿನಲ್ಲಿ ಕಾಡಿನ ಹೊರಗಡೆ ಮುಕ್ತವಾಗಿ ಸಂಚಾರ ಮಾಡಲು ಹೆದರುತ್ತವೆ. ಜಿಂಕೆಗಳು ಹೊರಬರಲು ಪ್ರಯತ್ನ ಮಾಡುತ್ತಿವೆ. ಕಾಡು ಪ್ರಾಣಿಗಳು ಮೂಲತಃ ಮುಕ್ತ ಶ್ರೇಣಿಯ ಪ್ರಾಣಿಗಳು. ಅವು ಹೊರಗಿನ ಪ್ರದೇಶ ಶಾಂತವಾಗಿದೆ ಎಂದು ತಿಳಿದಾಗ ಹೊರ ಬರಲು ಇಚ್ಚಿಸುತ್ತವೆ. ಆನೆಗಳು ಈಗಾಗಲೇ ಕಾಡುಗಳಿಂದ ಹೊರಗೆ ಬಂದು ಮುಕ್ತವಾಗಿ ಸಂಚಾರ ಮಾಡುತ್ತಿವೆ.
ಅರಣ್ಯ ಇಲಾಖೆ ಅಧಿಕಾರಿಗಳು, ಜನರು ಮತ್ತು ವಾಹನಗಳ ಸಂಚಾರಕ್ಕೆ ಈಗಾಗಲೇ ನಿರ್ಬಂಧ ಹೇರಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಬೇಟೆಯಾಡುವ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ರಾಜ್ಯದ ಮುಖ್ಯ ವನ್ಯಜೀವಿ ವಿಭಾಗದ ವಾರ್ಡನ್ ಕೂಡ ಆಗಿರುವ ಮೋಹನ್ ಹೇಳಿದ್ದಾರೆ. ಅಂತಹ ಚಟುವಟಿಕೆಗಳನ್ನು ತಡೆಯಲು ಇಲಾಖೆ ರಾತ್ರಿ ಗಸ್ತು ತಿರುಗುವುದು ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಮುಖಗವಸು, ಕೈಗವಸುಗಳನ್ನು ಧರಿಸುವುದು ಮತ್ತು ಅಂತರವನ್ನು ಕಾಪಾಡಿಕೊಳ್ಳುವುದು ಮುಂತಾದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಲಾಖೆ ಮತ್ತು ಪ್ರಾಣಿಸಂಗ್ರಹಾಲಯಗಳಲ್ಲಿನ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ಅವರು ವಿವರಿಸಿದರು. ಮೃಗಾಲಯಗಳಲ್ಲಿ ಈಗಾಗಲೇ ಸಿಬ್ಬಂದಿ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರು. ಈಗ ಮತ್ತೆ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ ಎಂದರು.
ಈ ವಾರದ ಆರಂಭದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಕರಡಿ ದಾಳಿಗೆ ಸಾವಿಗೀಡಾಗಿದ್ದರು. ಇದು ಕೂಡ ಕೊರೊನಾ ಪರಿಣಾಮದಿಂದ ಉಂಟಾದ ಘಟನೆ ಎಂದು ಹೇಳಬಹುದು. ಇನ್ನು ವನ್ಯಜೀವಿ ಸಂಘರ್ಷ ಎಲ್ಲಿದೆಯೋ ಅಲ್ಲೆಲ್ಲಾ ಬೋನುಗಳನ್ನು ಇರಿಸಲಾಗಿದೆ. ಆ ಮುಖಾಂತರ ನಾಡಿಗೆ ಬಂದ ವನ್ಯಜೀವಿಗಳನ್ನು ಸೆರೆಹಿಡಿದು ಅವುಗಳನ್ನು ಮರಳಿ ಕಾಡಿಗೆ ಬಿಡಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ಸುಮಾರು 6,000 ಆನೆಗಳು, 500 ಹುಲಿಗಳು, 2,500 ಚಿರತೆಗಳು ಮತ್ತು 600-700 ಸಿಂಹ ಬಾಲದ ಮಕಾಕ್ಗಳಿವೆ ಎಂದು ಅವರು ಹೇಳಿದ್ದಾರೆ.