ಪತಿಯನ್ನು ಸಿಲುಕಿಸಲು ಆತನ ಮೊಬೈಲ್ನಿಂದಲೇ ಪೊಲೀಸರಿಗೆ ಬಾಂಬ್ ಬೆದರಿಕೆ ಸಂದೇಶ ಆನೇಕಲ್: ಮಹಿಳೆಯೊಬ್ಬಳು ತನ್ನ ಪತಿಯ ಮೊಬೈಲ್ನಿಂದ ಹುಸಿ ಬಾಂಬ್ ಸ್ಫೋಟದ ಮೆಸೇಜ್ ಕಳುಹಿಸಿ ಕೊನೆಗೆ ಸಿಕ್ಕಿಬಿದ್ದಿರುವ ಘಟನೆ ಆನೇಕಲ್ನಲ್ಲಿ ನಡೆದಿದೆ.
ಪ್ರಕರಣ ಹೀಗಿದೆ:ಆನೇಕಲ್ ಪಟ್ಟಣದ ಮಾರುತಿ ಬಡಾವಣೆಯಲ್ಲಿ ಉತ್ತರ ಕರ್ನಾಟಕ ಮೂಲದ ಕಿರಣ್ ಮತ್ತು ವಿದ್ಯಾರಾಣಿ ಎಂಬ ದಂಪತಿ ವಾಸವಿದ್ದರು. ಮೊಬೈಲ್ ಆ್ಯಪ್ ಒಂದರ ಮೂಲಕ ವಿದ್ಯಾರಾಣಿಗೆ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರು ನಿರಂತರ ಚ್ಯಾಟಿಂಗ್ ಮಾಡುತ್ತಿದ್ದರು. ಈ ವಿಚಾರ ಕೆಲ ದಿನಗಳ ಹಿಂದೆ ಗಂಡ ಕಿರಣ್ಗೆ ಗೊತ್ತಾಗಿದೆ, ಈ ವಿಚಾರ ದಂಪತಿಗಳ ಮಧ್ಯೆ ಗಲಾಟೆಗೆ ಕಾರಣವಾಗಿತ್ತು. ಪರಿಣಾಮ ಪತ್ನಿ ವಿದ್ಯಾರಾಣಿಯ ಮೊಬೈಲ್ನ್ನು ಕಿರಣ್ ಒಡೆದು ಹಾಕಿದ್ದ.
ಈ ಸಂಗತಿಯನ್ನು ಬೇರೆ ನಂಬರ್ ಮೂಲಕ ವಿದ್ಯಾರಾಣಿ ತನ್ನ ಸ್ನೇಹಿತನಿಗೆ ತಿಳಿಸಿದ್ದಳು. ಬಳಿಕ ಇಬ್ಬರು ಸೇರಿ ಕಿರಣ್ರನ್ನು ಸಿಲುಕಿಸುವ ಸಂಚು ರೂಪಿಸಿದ್ದರು. ಇದಕ್ಕಾಗಿ ವಿದ್ಯಾರಾಣಿಯ ಸ್ನೇಹಿತ ಹಾಗೂ ಆತನ ಸ್ನೇಹಿತರು ವಿದ್ಯಾರಾಣಿಗೆ ಕೆಲವು ಸಂದೇಶಗಳನ್ನು ಕಳುಹಿಸುತ್ತಿದ್ದರು. ಕಳುಹಿಸಿದ ಈ ಮೆಸೇಜ್ಗಳನ್ನು ವಿದ್ಯಾರಾಣಿ ತನ್ನ ಗಂಡನ ಮೊಬೈಲ್ಗೆ ಕಳುಹಿಸಿಕೊಂಡಿದ್ದಾಳೆ. ಬಳಿಕ ಆ ಮೊಬೈಲ್ನಿಂದಲೇ 'ಡಿಸೆಂಬರ್ 5ರಂದು ಆರ್ಡಿಎಕ್ಸ್ ಬಾಂಬ್’ ಸ್ಫೋಟಿಸುವ ಬೆದರಿಕೆ ಮೆಸೇಜ್ಗಳನ್ನು ಪೊಲೀಸ್ ಹಾಗೂ ಕೇಂದ್ರ ತನಿಖಾ ತಂಡಗಳಿಗೆ ಖುದ್ದು ಕಳುಹಿಸಿದ್ದಳು. ಅನಂತರ ಅವುಗಳನ್ನು ತನ್ನ ಪತಿಯ ಮೊಬೈಲ್ನಲ್ಲಿ ಡಿಲೀಟ್ ಮಾಡಿದ್ದಳು.
ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಮೆಸೇಜ್ ಬಂದಿದ್ದ ಫೋನ್ ನಂಬರ್ ಮೂಲ ಹುಡುಕಿಕೊಂಡು ಹೊರಟಿದ್ದಾರೆ. ಮಾಹಿತಿ ದೊರಕಿದಂತೆ ಸೀದಾ ಕಿರಣ್ ಮನೆಗೆ ಬಂದು ಪೊಲೀಸರು ದಂಪತಿಯನ್ನು ವಿಚಾರಣೆಗೊಳಪಡಿಸಿದ್ದು, ಆಗ ಸತ್ಯ ಬಯಲಾಗಿದೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ವಿದ್ಯಾರಾಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ಮಾಸ್ಟರ್ ಮೈಂಡ್ ಆಕೆಯ ಸ್ನೇಹಿತನಿಗಾಗಿ ಬಲೆ ಬೀಸಿದ್ದು ವಿಚಾರಣೆ ಮುಂದುವರೆದಿದೆ.
ಇದನ್ನೂ ಓದಿ:ಪದೆ ಪದೇ ವಿಳಾಸ ಬದಲಿಸಿಕೊಂಡು 21 ವರ್ಷದಿಂದ ಎಸ್ಕೇಪ್: ಕೊನೆಗೂ ಪೊಲೀಸರ ಬಲೆಗೆ ಬಿದ್ದ ಆರೋಪಿ
ಎಸ್ಪಿ ಪ್ರತಿಕ್ರಿಯೆ:''ಬೆದರಿಕೆ ಸಂದೇಶ ಪ್ರಕರಣ ಸಂಬಂಧ ಆರೋಪಿ ಮಹಿಳೆಯ ಪತಿ ಕಿರಣ್ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರಾಣಿ ಜೊತೆ ಸಂಪರ್ಕದಲ್ಲಿದ್ದ ರಾಮ್ ಪ್ರಸಾದ್ ಎಂಬ ವ್ಯಕ್ತಿಯ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮಹಿಳೆಯು ಆ್ಯಪ್ ಮೂಲಕ ವ್ಯಕ್ತಿಯ ಜೊತೆ ಪರಿಚಯವಾಗಿ ಬಳಿಕ ಪರಸ್ಪರ ಚಾಟ್ ಮಾಡುತ್ತಿದ್ದರು. ಇದು ಕಳೆದ 6 ತಿಂಗಳಿಂದಲೂ ನಡೆದಿತ್ತು. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಬಳಿಕ ಮಹಿಳೆಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಎಲ್ಲ ವಿಚಾರದ ಬಗ್ಗೆ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ'' ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.