ಕರ್ನಾಟಕ

karnataka

ನ್ಯಾಯಾಲಯದ ಆದೇಶವಿದ್ದರೂ, ಪತಿಯೊಂದಿಗೆ ಬಾರದ ಪತ್ನಿ: ವಿಚ್ಛೇದನಕ್ಕೆ ಆಧಾರ- ಹೈಕೋರ್ಟ್

ಪತಿಯನ್ನು ಸೇರುವಂತೆ ಆದೇಶವಿದ್ದರೂ ಸಹ ಪತಿಯೊಂದಿಗೆ ಪತ್ನಿ ಬಾರದೇ ಇದ್ದುದರಿಂದ ಅದು ವಿಚ್ಛೇದನಕ್ಕೆ ಆಧಾರವಾಗುತ್ತದೆ ಎಂದು ಹೈಕೋರ್ಟ್​ ಅಭಿಪ್ರಾಯಪಟ್ಟಿದೆ.

By ETV Bharat Karnataka Team

Published : Oct 19, 2023, 9:38 PM IST

Published : Oct 19, 2023, 9:38 PM IST

ETV Bharat / state

ನ್ಯಾಯಾಲಯದ ಆದೇಶವಿದ್ದರೂ, ಪತಿಯೊಂದಿಗೆ ಬಾರದ ಪತ್ನಿ: ವಿಚ್ಛೇದನಕ್ಕೆ ಆಧಾರ- ಹೈಕೋರ್ಟ್

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು:ಪತಿಯನ್ನು ಸೇರುವಂತೆ ನ್ಯಾಯಾಲಯದ ಆದೇಶವಿದ್ದರೂ ಸಹ ಪತ್ನಿ ಅದನ್ನು ಪಾಲಿಸದಿರುವುದು ವಿವಾಹ ವಿಚ್ಚೇದನಕ್ಕೆ ಆಧಾರವಾಗಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಆರ್.ಕೃಷ್ಣಕುಮಾರ್ ಮತ್ತು ನ್ಯಾಯಮೂರ್ತಿ ಜಿ.ಬಸವರಾಜ್ ಅವರಿದ್ದ ವಿಭಾಗೀಯಪೀಠ ಇತ್ತೀಚೆಗೆ ಈ ಆದೇಶ ನೀಡಿ, ವಿಚ್ಚೇದನ ಮಂಜೂರು ಮಾಡಿತು.

ನ್ಯಾಯಾಲಯ ವೈವಾಹಿಕ ಹಕ್ಕು ಪುನರ್‌ಸ್ಥಾಪನೆ ಸಂಬಂಧ ಏಕಪಕ್ಷೀಯ ಆದೇಶ ಹೊರಡಿಸಿ ಪತಿಯನ್ನು ಸೇರುವಂತೆ ಪತ್ನಿಗೆ ಆದೇಶಿಸಿದೆ. ಪತ್ನಿ ಒಂದುವರೆ ವರ್ಷ ಕಳೆದರೂ ಆದೇಶವನ್ನು ಪಾಲಿಸಿಲ್ಲ. ಹಾಗಾಗಿ ಆದೇಶ ಉಲ್ಲಂಘನೆಯೇ ವಿವಾಹ ವಿಚ್ಚೇದನಕ್ಕೆ ಆಧಾರವಾಗಿದೆ, ಇದು ಹಿಂದೂ ವಿವಾಹ ಕಾಯಿದೆ 1955ರ ಸೆಕ್ಷನ್ 13 (1ಎ)(2) ವ್ಯಾಪ್ತಿಗೆ ಒಳಪಡುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ. ಕೌಟುಂಬಿಕ ನ್ಯಾಯಾಲಯ ಪ್ರಕರಣದ ಅಂಶಗಳನ್ನು ಪರಿಗಣಿಸದೆ, ಪತಿಯ ಅರ್ಜಿಯನ್ನು ವಜಾಗೊಳಿಸಿರುವುದು ಸರಿಯಲ್ಲ. ಆ ಮೂಲಕ ಕೌಟುಂಬಿಕ ನ್ಯಾಯಾಲಯ ತಪ್ಪೆಸಗಿದೆ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ದಂಪತಿ 2009ರಲ್ಲಿ ಮದುವೆಯಾಗಿದ್ದರು. ಆನಂತರ ಅವರಿಗೆ ಒಂದು ಗಂಡು ಮಗುವೂ ಜನಿಸಿತ್ತು. ಪತಿ ಬೆಳಗಾವಿ ತಾಲೂಕು ರಾಯಭಾಗದಲ್ಲಿ ನೆಲೆಸಿದ್ದರು. ಆದರೆ ಪತ್ನಿ ಪತಿಯಿಂದ ದೂರವಾಗಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸನಗರದಲ್ಲಿ ಮೂರು ವರ್ಷ ಪ್ರತ್ಯೇಕವಾಗಿ ನೆಲೆಸಿದ್ದರು. ಆ ನಂತರ ಪತಿ, ತಮ್ಮ ವೈವಾಹಿಕ ಹಕ್ಕು ಪುನರ್ ಸ್ಥಾಪನೆ ಕೋರಿ 2016ರಲ್ಲಿ ರಾಯಭಾಗ ಕೋರ್ಟ್ ಮೊರೆ ಹೋಗಿದ್ದರು.

ರಾಯಭಾಗ ನ್ಯಾಯಾಲಯ 2016 ರ ಡಿ. 5ರಂದು ಅರ್ಜಿದಾರರ ಪರ ಏಕಪಕ್ಷೀಯ ಆದೇಶ ನೀಡಿ, ಪತ್ನಿ ಪತಿಯನ್ನು ಸೇರುವಂತೆ ನಿರ್ದೇಶನ ನೀಡಿತ್ತು. ಆದರೆ ಆ ಆದೇಶವನ್ನು ಪತ್ನಿ ಪಾಲಿಸಲಿಲ್ಲ. ಕೋರ್ಟ್ ಮುಂದೆಯೂ ಹಾಜರಾಗಲಿಲ್ಲ. ಆ ನಂತರ ಪತ್ನಿ ತೊರೆದು ಹೋಗಿದ್ದಾರೆ ಎಂಬ ಆಧಾರದಲ್ಲಿ ವಿವಾಹ ವಿಚ್ಚೇದನ ನೀಡುವಂತೆ ಕೋರಿದ್ದರು. ಪತ್ನಿ ಮತ್ತೆ ಕೋರ್ಟ್‌ಗೆ ಹಾಜರಾಗಲಿಲ್ಲ, ಆದರೆ ಕೌಟುಂಬಿಕ ನ್ಯಾಯಾಲಯ ಪತಿಯ ಅರ್ಜಿಯನ್ನು ವಜಾಗೊಳಿಸಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ಇದನ್ನೂ ಓದಿ:ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡುವ ಮುನ್ನ ಸಂತ್ರಸ್ತೆಯ ಕಡೆಯವರಿಗೆ ತಿಳಿಸಬೇಕು: ಹೈಕೋರ್ಟ್

ABOUT THE AUTHOR

...view details