ಬೆಂಗಳೂರು :ಪ್ರಿಯಕರನ ಜೊತೆ ಸಂಚು ರೂಪಿಸಿ ಗಂಡನನ್ನು ಮನೆಯಲ್ಲಿಯೇ ಕೊಲೆ ಮಾಡಿ, ಸಹಜ ಸಾವು ಎಂದು ಹೇಳಿ ಪ್ರಕರಣದ ದಿಕ್ಕು ತಪ್ಪಿಸಿದ್ದ ಪತ್ನಿ ಹಾಗೂ ಆಕೆಯ ಪ್ರಿಯತಮನನ್ನು ವರ್ತೂರು ಪೊಲೀಸರು ಬಂಧಿಸಿದ್ದಾರೆ.
ಚಂದ್ರಶೇಖರ್ ಕೊಲೆಯಾದ ದುರ್ದೈವಿ. ಮೃತ ವ್ಯಕ್ತಿಯ ತಾಯಿ ಗಾಯತ್ರಿ ಎಂಬುವರು ನೀಡಿದ ದೂರಿನ ಮೇರೆಗೆ ಸೊಸೆ ಪುಷ್ಪಾವತಿ ಹಾಗೂ ಆಕೆಯ ಪ್ರಿಯಕರ ಮನು ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೆ ಆರ್ ನಗರ ಚಿನಕುರಳಿ ಗ್ರಾಮದ ಚಂದ್ರಶೇಖರ್ 13 ವರ್ಷಗಳ ಹಿಂದೆ ಪುಷ್ಪಾವತಿಯೊಂದಿಗೆ ಮದುವೆಯಾಗಿದ್ದರು. ವರ್ತೂರು ಠಾಣಾ ವ್ಯಾಪ್ತಿಯ ಸಿದ್ದಾಪುರಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.
ಖಾಸಗಿ ಕಂಪನಿಯೊಂದರಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಏಳು ವರ್ಷಗಳ ಹಿಂದೆ ಕೆಲಸ ಮಾಡುತ್ತಿದ್ದ ಕಟ್ಟಡದಿಂದ ಕೆಳಗೆ ಬಿದ್ದು ತಲೆಗೆ ಗಾಯಮಾಡಿಕೊಂಡಿದ್ದರು.
ಅಲ್ಲದೆ ಮೂರ್ಛೆ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಮೃತನ ಪತ್ನಿ ಪುಷ್ಪಾವತಿ ಹೇಳುವಂತೆ ಕಳೆದ ತಿಂಗಳು 21ರಂದು ಕೆಲಸ ಮುಗಿಸಿಕೊಂಡು ಮನೆಗೆ ಬಂದು ಕೈ -ಕಾಲುಗಳು ನಡುಗುತ್ತಿವೆ.
ಸ್ನಾನ ಮಾಡಿಕೊಂಡು ಬರುವೆ ಎಂದು ಹೋದವರು ಸ್ನಾನದ ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯರ ಸಹಾಯದಿಂದ ಆಸ್ಪತ್ರೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಗಂಡನ ಮನೆಯವರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಳು.
ಓದಿ:ವ್ಯಕ್ತಿ ಮೇಲೆ ಯುವತಿ-ಯುವಕರಿಂದ ಅಮಾನವೀಯ ರೀತಿ ಹಲ್ಲೆ: ವಿಡಿಯೋ ವೈರಲ್
ಮಾಹಿತಿ ಆಧರಿಸಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಶವ ಪರೀಕ್ಷೆ ಬಳಿಕ ಚಂದ್ರಶೇಖರ್ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು.
ಊರಿನಲ್ಲಿ ಅಂತ್ಯ ಸಂಸ್ಕಾರ ಮಾಡಿದ ನಂತರ, ಸಾವಿನ ಬಗ್ಗೆ ಕುಟುಂಬಸ್ಥರು ಚರ್ಚೆ ನಡೆಸುವಾಗ ಈ ವೇಳೆ ಮನು ಎಂಟ್ರಿಯಾಗಿದ್ದ. ಇದನ್ನು ಪ್ರಶ್ನಿಸಿ ಪುಷ್ಪಾವತಿಯನ್ನು ತರಾಟೆ ತೆಗೆದುಕೊಂಡಾಗ ಅಕ್ರಮ ಸಂಬಂಧ ಬೆಳಕಿಗೆ ಬಂದಿದೆ.
ಎರಡು ವರ್ಷಗಳ ಹಿಂದೆ ಮಾಜಿ ಮಿಲಿಟಿರಿ ಅಧಿಕಾರಿ ಮನು ಎಂಬುವನೊಂದಿಗೆ ಪುಷ್ಪಾವತಿ ಎರಡು ವರ್ಷಗಳಿಂದಲೂ ಸಂಬಂಧ ಹೊಂದಿದ್ದಳು ಎಂಬ ವಿಚಾರ ಮೃತನ ಕುಟುಂಬಸ್ಥರಿಗೆ ತಿಳಿದಿದೆ. ಇದರಿಂದ ಅಸಮಾಧಾನಗೊಂಡು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಳು.
ಅನುಮಾನದ ಮೇರೆಗೆ ಪೊಲೀಸರಿಗೆ ಪುಷ್ಟಾವತಿ ವಿರುದ್ಧ ಚಂದ್ರಶೇಖರ್ ಕುಟುಂಬಸ್ಥರು ವರ್ತೂರು ಠಾಣೆಗೆ ದೂರು ನೀಡಿದ್ದರು. ದೂರಿನಡಿ ಪುಷ್ಟಾವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಿಯತಮ ಮನು ಎಂಬುವನೊಂದಿಗೆ ಸೇರಿ ಕೊಲೆ ಮಾಡಿರುವ ವಿಷಯವನ್ನು ಬಾಯ್ಬಿಟ್ಟಿದ್ದಾಳೆ.
ಫೆಬ್ರವರಿ 21ರಂದು ಕೆಲಸ ಮುಗಿಸಿಕೊಂಡು ಚಂದ್ರಶೇಖರ್ ಮನೆಗೆ ಬಂದಿದ್ದ. ಅವರು ಬರುವ ಮೊದಲೇ ಒಳಗಡೆ ಅವಿತುಕೊಂಡಿದ್ದ ಆರೋಪಿ ಮನು, ಈ ಹಿಂದೆ ಚಂದ್ರಶೇಖರ್ ತಲೆಗೆ ಪೆಟ್ಟಾಗಿದ್ದ ಜಾಗಕ್ಕೆ ರಾಡ್ನಿಂದ ಹೊಡೆದಿದ್ದಾನೆ.
ಹೊಡೆತದ ರಭಸಕ್ಕೆ ಚಂದ್ರಶೇಖರ್ ಮೃತಪಟ್ಟಿದ್ದು, ಬಳಿಕ ಬಾತ್ ರೂಂನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾಗಿ ಬಿಂಬಿಸಲಾಗಿತ್ತು ಎಂದು ವಿಚಾರಣೆ ವೇಳೆ ಪೊಲೀಸರ ಎದುರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.