ಬೆಂಗಳೂರು: ತನ್ನ ಗಂಡ ಪ್ರತಿದಿನ ಅಶ್ಲೀಲ ವಿಡಿಯೋ ನೋಡುತ್ತಾನೆ. ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಕಂಡಕಂಡ ಯುವತಿಯರ ಜತೆ ಲೈವ್ ವಿಡಿಯೋದಲ್ಲಿ ಮಾತನಾಡುತ್ತಾನೆ. ವೇಶ್ಯೆಯರ ಜೊತೆ ಚಾಟಿಂಗ್ ಮಾಡುತ್ತಾನೆ. ಅಷ್ಟೇ ಅಲ್ಲ ಪತ್ನಿಯಾದ ನಾನು ಜತೆಯಲ್ಲಿ ಇದ್ದರೂ ವಿಚ್ಛೇದಿತ ಎಂದು ಮ್ಯಾಟ್ರಿಮೋನಿಯಲ್‌ನಲ್ಲಿ ಪ್ರೊಫೈಲ್ ತೆರೆದಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಕಿರುಕುಳ ಕೊಡುತ್ತಿದ್ದಾನೆ ಎಂದು ಮಹಿಳೆಯೊಬ್ಬರು ಕಣ್ಣೀರು ಹಾಕುತ್ತಾ ದೂರು ನೀಡಿದ್ದು, ಕೋರ್ಟ್ ಸೂಚನೆ ಮೇರೆಗೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿತ್ಯ ಮನೆಯಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿ, ಪೋರ್ನ್ ವೆಬ್‌ಸೈಟ್ ಚಾಟಿಂಗ್ ಮಾಡುವುದನ್ನು ಪ್ರಶ್ನಿಸಿದಕ್ಕೆ ಕಿರುಕುಳ ನೀಡಿ ಹಿಂಸೆ ನೀಡುತ್ತಿರುವುದಾಗಿ ಮೊದಲು ಸಂತ್ರಸ್ತೆ ತನ್ನ ಗಂಡನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಳು. ಕೇಸ್ ದಾಖಲಿಸಲು ನಿರಾಕರಿಸಿದ ಪೊಲೀಸರು ಕೇವಲ ಚಾಟಿಂಗ್, ಅಶ್ಲೀಲ ವಿಡಿಯೋ ನೋಡಿದ್ದಕ್ಕೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದರು. ಈ ಹಿನ್ನೆಲೆ ಮಹಿಳೆ 1ನೇ ಎಸಿಎಂಎಂ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರತಿದಿನ ಪೋರ್ನ್ ವಿಡಿಯೋ ವೀಕ್ಷಣೆಯಲ್ಲಿ ಪತಿ ನಿರತರಾಗುತ್ತಾನೆ. ಆನಂತರ ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಯುವತಿಯರ ಜತೆ ಲೈವ್ ವಿಡಿಯೋ ದುಶ್ಚಟಕ್ಕೆ ಬಿದ್ದಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಕಿರುಕುಳ ನೀಡುತ್ತಿದ್ದನಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ವಿಚ್ಛೇದಿತ ಎಂದು ಪೋಸ್ಟ್ ಹಾಕಿಕೊಂಡಿದ್ದಾನೆ ಎಂದು ಪತಿಯ ವಿರುದ್ಧ ಪತ್ನಿ ಆರೋಪಿಸಿದ್ದರು.