ಬೆಂಗಳೂರು:10 ದಿನಗಳ ಗಂಡು ಮಗುವಿನ ತಂದೆಗಾಗಿ ಅಸ್ಸೋಂ ಮೂಲದ ಮಹಿಳೆ ಯಶವಂತಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವಿವಾಹವಾಗಿ ಗಂಡು ಮಗುವಿಗೆ ತಂದೆಯಾದರೂ ಮಗು ತನ್ನದಲ್ಲ, ವಿವಾಹವೇ ಆಗಿಲ್ಲ ಹೇಳುತ್ತಿರುವ ಪತಿ ವಿರುದ್ದ ಕಾನೂನು ಕ್ರಮಕ್ಕಾಗಿ ಮಹಿಳೆ ದೂರು ನೀಡಿದ್ದಾರೆ.
ಅಸ್ಸೋಂನ ಗುವಾಹಟಿ ಮೂಲದ ಮಹಿಳೆ ನೀಡಿದ ದೂರಿನ ಮೇರೆಗೆ ಚನ್ನರಾಯಪಟ್ಟಣ ಮೂಲದ ಮೀರ್ ಹೈದರ್ ಆಲಿ ತಬರೇಜ್ ವಿರುದ್ಧ ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ. 5 ವರ್ಷಗಳ ಹಿಂದೆ ಮಹಿಳೆಯು ದುಬೈನಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ತೆರೆದಿದ್ದರು. ಇದೇ ಕಂಪನಿಯಲ್ಲಿ ತಬರೇಜ್ ಕೆಲಸಕ್ಕೆ ಸೇರಿಕೊಂಡಿದ್ದ.
ಡಿಎನ್ಐ ಪರೀಕ್ಷೆ ಮಾಡಿಸು ಎಂದ: ಹೀಗೆ ಆರಂಭವಾದ ಪರಿಚಯ ಸಲುಗೆಗೆ ತಿರುಗಿತ್ತು, ಮೂರು ವರ್ಷಗಳ ಕಾಲ ವಿವಾಹೇತರ ಸಂಬಂಧ ಹೊಂದಿದ್ದಾರೆ. ಬಳಿಕ ಇಬ್ಬರು ದುಬೈನಿಂದ ಭಾರತಕ್ಕೆ ಬಂದು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದು, ಕೆಲ ತಿಂಗಳಲ್ಲೇ ಮಹಿಳೆ ಗರ್ಭಿಣಿಯಾಗಿದ್ದಾರೆ. ಎಂಟು ತಿಂಗಳ ಗರ್ಭಿಣಿಯಾಗಿದ್ದಾಗ ಕೆಲಸದ ನಿಮಿತ್ತ ಬೆಂಗಳೂರಿಗೆ ಹೊರಟ ಪತಿ ತಬರೇಜ್ ಮತ್ತೆ ವಾಪಸ್ ಬಂದಿರಲಿಲ್ಲ. ನಂತರ ಪತಿಯನ್ನು ಭೇಟಿಯಾದಾಗ ನಿನ್ನ ಗರ್ಭಧಾರಣೆಗೆ ನಾನು ಕಾರಣನಲ್ಲ. ಬೇಕಾದರೆ ಡಿಎನ್ಐ ಪರೀಕ್ಷೆ ಮಾಡಿಸು ಎಂದು ತನ್ನಿಂದ ದೂರವಾಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪ ಅಲ್ಲಗಳೆದ ಆರೋಪಿ:ಪ್ರಕರಣ ದಾಖಲಿಸಿಕೊಂಡ ಯಶವಂತಪುರ ಪೊಲೀಸರು ತಬರೇಜ್ನನ್ನು ಕರೆದು ಪ್ರಶ್ನಿಸಿದಾಗ ಮಹಿಳೆಯು ತನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಹಾಗೂ ಮಹಿಳೆ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರು ಸ್ನೇಹಿತರಾಗಿದ್ದೆವು. ಅವರನ್ನು ನಾನು ಮದುವೆಯಾಗಿಲ್ಲ, ಮಗುವಿಗೆ ನಾನು ತಂದೆಯಲ್ಲ. ಬೇಕಾದರೆ ನಾನು ಡಿಎನ್ಎ ಟೆಸ್ಟ್ಗೆ ಒಳಗಾಗಲು ಸಿದ್ಧನಿದ್ದೇನೆ ಎಂದು ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೃತ್ಯ ನಡೆದ ಸ್ಥಳದ ಆಧಾರದ ಮೇರೆಗೆ ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ಪ್ರಕರಣ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ:ಸುರತ್ಕಲ್ ಯುವಕ ಫಾಜಿಲ್ ಹತ್ಯೆ ಪ್ರಕರಣ: 21 ಮಂದಿ ಪೊಲೀಸರ ವಶಕ್ಕೆ