ಬೆಂಗಳೂರು:ಗಂಡನ ನಿಧನದ ಬಳಿಕ ವಿಧವೆಯು ತನ್ನ ಪತಿಯ ಹೆಸರಿನಲ್ಲಿದ್ದ ಆಸ್ತಿಯನ್ನು ಮಕ್ಕಳಿಗೆ ಪಾಲು ಮಾಡುವ ವೇಳೆ ಗಂಡು ಮಕ್ಕಳಲ್ಲಿ ಯಾವುದೇ ಮಗ ಮೃತಪಟ್ಟಿದ್ದರೆ ಆತನ ಪಾಲಿಗೆ ಬಂದಿರುವ ಆಸ್ತಿಯಲ್ಲಿ ತಾಯಿ ಸಮಾನ ಪಾಲು ಪಡೆಯಬಹುದು ಎಂದು ಹೈಕೋರ್ಟ್ ತಿಳಿಸಿದೆ. ಹಿಂದೂ ಉತ್ತರಾಧಿಕಾರಿ ಕಾಯ್ದೆ ಪ್ರಕಾರ ಮೃತ ಮಗನಿಗೆ ಬಂದಿರುವ ಆಸ್ತಿಯನ್ನು ಆತನ ಪತ್ನಿ ಹಾಗೂ ಮಕ್ಕಳಿಗೆ ಸಮಾನವಾಗಿ ಹಂಚಿಕೆಯಾಬೇಕು. ಅದರ ಜೊತೆಗೆ, ವಿಧವೆ ತಾಯಿಗೂ ಸಮಾನ ಹಂಚಿಕೆಯಾಗಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಬೀದರ್ನ ಹನುಮಂತ ರೆಡ್ಡಿ ಹಾಗೂ ಈರಮ್ಮ ಎಂಬ ದಂಪತಿ ಹಾಗೂ ಮಕ್ಕಳ ನಡುವಿನ ಆಸ್ತಿ ಹಂಚಿಕೆ ಪ್ರಕರಣವೊಂದರಲ್ಲಿ ವಿಚಾರಣೆ ನಡೆಸಿ ಹೈಕೋರ್ಟ್ ಈ ತೀರ್ಪು ನೀಡಿದೆ. ಹನುಮಂತ ರೆಡ್ಡಿ ಹಾಗೂ ಈರಮ್ಮ ದಂಪತಿಗೆ ಪೊರಸರೆಡ್ಡಿ, ಭೀಮರೆಡ್ಡಿ, ರೇವಮ್ಮ ಹಾಗೂ ಬಸವರೆಡ್ಡಿ ಎಂಬ ನಾಲ್ಕು ಮಕ್ಕಳಿದ್ದರು. ತಂದೆ ಹನುಮಂತ ರೆಡ್ಡಿ ಹಾಗೂ ಪುತ್ರ ಭೀಮರೆಡ್ಡಿ ಮೃತಪಟ್ಟಿರುತ್ತಾರೆ. ಆಸ್ತಿ ಹಂಚಿಕೆ ವಿಚಾರದಲ್ಲಿ ತಾಯಿ, ಮಕ್ಕಳ ನಡುವೆ ಗೊಂದಲ ಏರ್ಪಟ್ಟ ಹಿನ್ನೆಲೆಯಲ್ಲಿ ಈ ವಿಚಾರ ಬೀದರ್ ಜಿಲ್ಲೆಯ ಸ್ಥಳೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, ಅಲ್ಲಿ ಬಂದ ತೀರ್ಪು ಸಮಾಧಾನ ತರದ ಹಿನ್ನೆಲೆಯಲ್ಲಿ ತಾಯಿ, ಹೈಕೋರ್ಟ್‌ಗೆ ಅರ್ಜಿ ಹಾಕಿದ್ದರು.
ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಪೀಠ, ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಪ್ರಕಾರ ಆಸ್ತಿ ಹಂಚಿಕೆ ಮಾಡಬೇಕಾಗುತ್ತದೆ. ಹೀಗಾಗಿ ಆಸ್ತಿ ಹಂಚಿಕೆ ವೇಳೆ ಪತಿಯ ಪಾಲಿಗೆ ಬರಬೇಕಾದ ಆಸ್ತಿಯಲ್ಲಿ ಆಕೆಗೆ ಭಾಗಶಃ ಪಾಲು ನೀಡಲಾಗುತ್ತದೆ. ಇದರನ್ವಯ, ಈ ಪ್ರಕರಣದಲ್ಲಿ ಮೃತಪಟ್ಟ ಮಗನ ಆಸ್ತಿಯ ಪಾಲಿನಲ್ಲಿಯೂ ನೀಡಬೇಕಾಗುತ್ತದೆ ಎಂದು ನ್ಯಾಯಪೀಠ ಸೂಚನೆ ನೀಡಿದೆ.