ಸೋಂಕಿತರ ಸಾವಿನ ಸಂಖ್ಯೆ ಕಡಿಮೆಯಾಗ್ತಿಲ್ಲ: ತಜ್ಞರು ಕೊಡುವ ಕಾರಣ ಹೀಗಿದೆ.. - ಕೋವಿಡ್ ಸಾವು ಯಾಕೆ ಕಡಿಮೆಯಾಗುತ್ತಿಲ್ಲ
ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಮೃತಪಡುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಹೋದಂತೆ, ಕೋವಿಡ್ ಸೋಂಕಿತರ ಸಾವಿಗೆ ಹಲವು ಕಾರಣಗಳು ಕಂಡು ಬರುತ್ತವೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ
By
Published : May 25, 2021, 2:13 PM IST
|
Updated : May 25, 2021, 5:38 PM IST
ಬೆಂಗಳೂರು: ರಾಜ್ಯಾದ್ಯಂತ, ಅದರಲ್ಲೂ ಪ್ರಮುಖವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದು ಸಮಾಧಾನ ತಂದಿದೆಯಾದರೂ, ಕೋವಿಡ್ ಮರಣ ಮೃದಂಗಕ್ಕೆ ತಡೆ ಬೀಳದಿರುವುದು ಭೀತಿ ಹುಟ್ಟಿಸಿದೆ.
ನಗರದಲ್ಲಿ ಪ್ರತಿನಿತ್ಯ 26 ಸಾವಿರದಷ್ಟು ಬರುತ್ತಿದ್ದ ಕೋವಿಡ್ ಪ್ರಕರಣಗಳ ಸಂಖ್ಯೆ, 5 ರಿಂದ 6 ಸಾವಿರಕ್ಕೆ ಇಳಿಕೆಯಾಗಿದೆ. ಆದರೆ, ಸಾವಿನ ಸಂಖ್ಯೆ ಮಾತ್ರ 300 ರ ಆಸುಪಾಸಿನಲ್ಲೇ ಇದೆ. ಐಸಿಯು, ವೆಂಟಿಲೇಟರ್ ಕೊರತೆಯೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗ್ತಿದೆ. ಕಳೆದ ಹತ್ತು ದಿನದಲ್ಲಿ ರಾಜ್ಯಾದ್ಯಂತ 5 ಸಾವಿರಕ್ಕೂ ಹೆಚ್ಚು ಮಂದಿ ಕೋವಿಡ್ನಿಂದ ಮೃತಪಟ್ಟಿದ್ದಾರೆ.
ತಜ್ಞರು ಕೊಡುವ ಕಾರಣ ಹೀಗಿದೆ.
ಅಲ್ಲದೆ, ರಾಜ್ಯದ ಏಳು ಜಿಲ್ಲೆಗಳಾದ ರಾಮನಗರ, ಕೊಡಗು, ಚಾಮರಾಜನಗರ, ಉತ್ತರಕನ್ನಡ, ಯಾದಗಿರಿ, ಮಂಡ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಕೋವಿಡ್ ಸಾವುಗಳು ಹೆಚ್ಚಾಗುತ್ತಿವೆ.
ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ:
ಮೇ ತಿಂಗಳ ಮೊದಲೆರಡು ವಾರಗಳಲ್ಲಿ ಅತಿಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಹೆಚ್ಚು ಕೋವಿಡ್ ಪ್ರಕರಣಗಳು ಕಂಡು ಬಂದ 10-15 ದಿನಗಳ ಬಳಿಕ ಕೋವಿಡ್ ಸಾವಿನ ಪ್ರಮಾಣದಲ್ಲಿ ಏರಿಕೆಯಾಗುವುದು ಸಾಮಾನ್ಯ. ಐಸಿಯುನಲ್ಲಿರುವ ರೋಗಿಗಳು ಚೇತರಿಕೆ ಕಾಣದೆ ಮೃತಪಡುವ ಸಾಧ್ಯತೆ ಇರುತ್ತದೆ. ಈಗ ಪ್ರಕರಣಗಳು ಹೊಸ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆ ಕೂಡ ಕಡಿಮೆಯಾಗಬಹುದೆಂದು ಡಾ.ಆಂಜನಪ್ಪ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ತಡವಾಗಿ ಕೋವಿಡ್ ಪರೀಕ್ಷೆ ಮಾಡಿಕೊಳ್ಳುತ್ತಿರುವುದು, ಸರಿಯಾದ ವೈದ್ಯಕೀಯ ಸಲಹೆ ಸಿಗದೆ ಔಷಧಗಳನ್ನು ತೆಗೆದುಕೊಳ್ಳುತ್ತಿರುವಲ್ಲಿ ವಿಳಂಬವಾಗುತ್ತಿರುವುದರಿಂದ ಮನೆಯಲ್ಲೇ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆರೋಗ್ಯ ಸ್ಥಿತಿ ಗಂಭೀರ ಸ್ವರೂಪಕ್ಕೆ ತಿರುಗಿದ ನಂತರ ಐಸಿಯು ಬೆಡ್ಗಾಗಿ ಹುಡುಕಾಟ ನಡೆಸುತ್ತಿರುವುದು. ಯುವಕರಲ್ಲಿ ಏಕಾಏಕಿ ಸೋಂಕು ಉಲ್ಬಣಿಸಿ ಆಗುತ್ತಿರುವ ಸಾವುಗಳು, ಸೋಂಕಿತರು ಆಮ್ಲಜನಕದ ಪ್ರಮಾಣ ಪ್ರತಿ ದಿನ ಪರೀಕ್ಷಿಸಿಕೊಳ್ಳದೆ ಇರುವುದು ಕೂಡ ಇದಕ್ಕೆ ಕಾರಣವಾಗಿದೆ.
ವಾರದ ಕೋವಿಡ್ ಸಾವಿನ ಲೆಕ್ಕ :
ಕ್ರ. ಸಂ
ದಿನಾಂಕ
ರಾಜ್ಯ
ಬೆಂಗಳೂರು
1
ಮೇ 17
476
239
2
ಮೇ 18
525
298
3
ಮೇ 19
468
218
4
ಮೇ 20
548
289
5
ಮೇ 21
353
129
6
ಮೇ 22
451
200
7
ಮೇ 23
626
362
8
ಮೇ 24
529
297
ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮಾತನಾಡಿ, ಆಮ್ಲಜನಕ ಬೆಡ್ಗಳ ಲಭ್ಯತೆ ಇದೆ. ಸಿಸಿ ಕೇಂದ್ರಗಳಲ್ಲಿಯೂ 3 ಸಾವಿರಕ್ಕಿಂತ ಹೆಚ್ಚು ಸಾಮಾನ್ಯ ಬೆಡ್ಗಳು ಇವೆ. ಇದರಲ್ಲಿ ಸಾವಿರ ಆಕ್ಸಿಜನ್ ಬೆಡ್ಗಳು ಇವೆ. ಸ್ಟೆಪ್ ಡೌನ್ ಆಸ್ಪತ್ರೆಗಳಲ್ಲಿ 1,200 ಬೆಡ್ಗಳು ಇವೆ. ಹೀಗಾಗಿ, ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಬ್ಲ್ಯಾಕ್ ಫಂಗಸ್ ಬಗ್ಗೆಯೂ ತಜ್ಞರ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಮೂರನೇ ಅಲೆಯ ಪೂರ್ವ ಸಿದ್ಧತೆಗಳ ಬಗ್ಗೆಯೂ ಚರ್ಚೆ ನಡೆಯುತ್ತಿವೆ. ಐಸಿಯು ಬೆಡ್ ಹೆಚ್ಚಳದ ಬಗ್ಗೆ ಚಿಂತಿಸಲಾಗ್ತಿದೆ ಎಂದರು.