ಕರ್ನಾಟಕ

karnataka

ETV Bharat / state

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಘಟಾನುಘಟಿಗಳು ಅಖಾಡಕ್ಕಿಳಿಯಲು ಕಾರಣವೇನು.?

ಡಿಸಿಸಿ ಬ್ಯಾಂಕ್ ಗದ್ದುಗೆ ಏರಲು ಕಮಲ‌ ಪಡೆಯ ಅಗ್ರ ನಾಯಕರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ನ. 6ಕ್ಕೆ ನಡೆಯಲಿರುವ ಈ ಜಿದ್ದಾಜಿದ್ದಿನ ಚುನಾವಣೆ ಡಿಸಿಎಂ ಲಕ್ಷ್ಮಣ್ ಸವದಿ, ಮಾಜಿ ಸಚಿವ ಉಮೇಶ್ ಕತ್ತಿ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೊಳಿ ನಡುವೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

DCC Bank
ಬೆಳಗಾವಿ ಡಿಸಿಸಿ ಬ್ಯಾಂಕ್

By

Published : Oct 30, 2020, 7:42 PM IST

ಬೆಂಗಳೂರು: ಜಾರಕಿ ಹೊಳಿ ಸಹೋದರರು ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ನಾಂದಿ ಹಾಡಿದ್ದ ಬೆಳಗಾವಿ ಗ್ರಾಮೀಣ ಪಿಎಲ್‍ಡಿ ಬ್ಯಾಂಕ್‍ ಚುನಾವಣೆ ಸಮರ ಮಾಸುವ ಮುನ್ನವೇ, ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್(ಡಿಸಿಸಿ)ಗೆ ಎದುರಾಗಿರುವ ಎಲೆಕ್ಷನ್​ ಕಾವು ಬಿರುಸುಗೊಂಡಿದೆ. ರಾಜ್ಯದ ಇನ್ಯಾವುದೇ ಡಿಸಿಸಿ ಬ್ಯಾಂಕ್​ಗಳು ಮಾಡದಷ್ಟು ಸದ್ದನ್ನು ಬೆಳಗಾವಿ ಡಿಸಿಸಿ ಬ್ಯಾಂಕ್ ಮಾಡಲು ಕಾರಣ ಏನು ಎಂಬ ವರದಿ ಇಲ್ಲಿದೆ.

ಈ ಚುನಾವಣೆ ಆಡಳಿತಾರೂಢ ಬಿಜೆಪಿಯಲ್ಲಿ ತಲ್ಲಣ ಮೂಡಿಸಿದೆ. ಬೆಳಗಾವಿಯ ಘಟಾನುಘಟಿ ಬಿಜೆಪಿ ನಾಯಕರ ಪ್ರತಿಷ್ಠೆಯ ಕಣವಾಗಿರುವ ಡಿಸಿಸಿ ಬ್ಯಾಂಕ್ ಚುನಾವಣೆ ರಾಜ್ಯ ರಾಜಕಾರಣದ‌ ಮೇಲೂ ಪರಿಣಾಮ ಬೀರಲಿದೆ. ಡಿಸಿಸಿ ಬ್ಯಾಂಕ್ ಗದ್ದುಗೆ ಏರಲು ಕಮಲ‌ ಪಡೆಯ ಅಗ್ರ ನಾಯಕರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ನ. 6ಕ್ಕೆ ನಡೆಯಲಿರುವ ಈ ಜಿದ್ದಾಜಿದ್ದಿನ ಚುನಾವಣೆ ಡಿಸಿಎಂ ಲಕ್ಷ್ಮಣ್ ಸವದಿ, ಮಾಜಿ ಸಚಿವ ಉಮೇಶ್ ಕತ್ತಿ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೊಳಿ ನಡುವೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಅಧಿಕಾರಕ್ಕಾಗಿ ಮೂರು ಗುಂಪುಗಳಾಗಿ ಮೂವರು ಘಟಾನುಘಟಿ ನಾಯಕರು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಹಗ್ಗಜಗ್ಗಾಟ ನಡೆಸುತ್ತಿದ್ದಾರೆ. ಸದ್ಯ ಉಮೇಶ್ ಕತ್ತಿ ಸಹೋದರ ಮಾಜಿ ಸಂಸದ ರಮೇಶ್ ಕತ್ತಿ ಅಧ್ಯಕ್ಷರಾಗಿದ್ದು, ಅವರನ್ನೇ ಮುಂದುವರೆಸಲು ಉಮೇಶ್‍ಕತ್ತಿ ಹರಸಾಹಸ ಪಡುತ್ತಿದ್ದರೆ. ಅದಕ್ಕೆ ಜಾರಕಿಹೊಳಿ ಬ್ರದರ್ಸ್ ಕೂಡ ಬೆಂಬಲ ನೀಡಿದ್ದಾರೆ. ಈ ನಡುವೆ ಡಿಸಿಸಿ ಬ್ಯಾಂಕ್ ಮೇಲೆ ಹಿಡಿತ ಸಾಧಿಸಲು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ. ಸರ್ಕಾರದ ಇಬ್ಬರು ನಾಮ ನಿರ್ದೇಶಿತ ಸದಸ್ಯರೂ ಸೇರಿ 16 ನಿರ್ದೇಶಕರಿರುವ ಡಿಸಿಸಿ ಬ್ಯಾಂಕ್‍ನಲ್ಲಿ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಯಲಿದ್ದು, ಬಿಜೆಪಿಯ ಮೂವರು ಪ್ರತಿಷ್ಠಿತ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದೆ.

ಘಟಾನುಘಟಿ ನಾಯಕರಿಗೇಕೆ ಪ್ರತಿಷ್ಠೆಯ ಕಣ:

ಸರ್ಕಾರದಲ್ಲಿ ಸಂಪುಟ ಸಚಿವ ಸ್ಥಾನದಲ್ಲಿರುವ ಪ್ರಮುಖರು, ಸಂಸದರುಗಳೇ ಕೇವಲ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣಾ ಅಖಾಡಕ್ಕಿಳಿಯಲು ಮುಂಚೂಣಿಯಲ್ಲಿರುತ್ತಾರೆ. ಇದು ಎಲ್ಲರ ಅಚ್ಚರಿಗೂ ಕಾರಣವಾಗಿದೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಜಿಲ್ಲೆಯ ಅತಿ ದೊಡ್ಡ ಸಹಕಾರಿ ಬ್ಯಾಂಕ್ ಆಗಿದೆ. ಸುಮಾರು 101 ಶಾಖೆಗಳನ್ನು ಹೊಂದಿರುವ ಈ ಡಿಸಿಸಿ ಬ್ಯಾಂಕ್ ನಡಿ 842 ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ. 10 ಭೌಗೋಳಿಕ ಕ್ಷೇತ್ರ ಹಾಗೂ 6 ವಲಯವಾರು ಕ್ಷೇತ್ರಗಳನ್ನು ಒಳಗೊಂಡಿದೆ.

ಜಿಲ್ಲೆಯ ಸುಮಾರು 40 ಲಕ್ಷ ರೈತರು ಡಿಸಿಸಿ ಬ್ಯಾಂಕಿನ ಫಲಾನುಭವಿಗಳಾಗಿದ್ದಾರೆ. ಹೀಗಾಗಿ ಬೆಳಗಾವಿ ಜಿಲ್ಲೆಯ ಘಟಾನುಘಟಿ ನಾಯಕರು, ಸಚಿವರು, ಸಂಸದರಿಗೆ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ಣಾಯಕ. ಬ್ಯಾಂಕ್ ಹಿಡಿತ ಯಾರ ಕೈಯಲ್ಲಿ ಇರುತ್ತೋ ಆತನೇ ಬೆಳಗಾವಿಯ ಫವರ್ ಫುಲ್ ಲೀಡರ್ ಆಗಿರುತ್ತಾರೆ.

ಈ ಬ್ಯಾಂಕ್ ಮೂಲಕ ಜಿಲ್ಲೆಯ ಸುಮಾರು 40 ಲಕ್ಷ ರೈತರ ನೇರ ಸಂಪರ್ಕ ಹೊಂದಲು ಸಾಧ್ಯವಾಗಿದೆ. ಈ ವರ್ಷ 25 ಕೋಟಿ ರೂ. ಲಾಭ ಗಳಿಸಿದೆ. ಸಾಲ ನೀಡುವ ಮೂಲಕ ರೈತರ ಜೊತೆಗೆ ನೇರ ಸಂಪರ್ಕ ಹೊಂದುವ ಕಾರಣ ಬ್ಯಾಂಕ್​ನ ಚುಕ್ಕಾಣಿ ಹಿಡಿಯುವುದು ರಾಜಕೀಯವಾಗಿ ನಿರ್ಣಾಯಕವಾಗಿದೆ. ಹೀಗಾಗಿ ಘಟಾನುಘಟಿ ನಾಯಕರುಗಳೇ ಚುನಾವಣಾ ಅಖಾಡಕ್ಕಿಳಿಯುತ್ತಾರೆ.

ದಶಕಗಳಿಂದ ಬೆಳಗಾವಿ ಡಿಸಿಸಿ ಬ್ಯಾಂಕಿನ ಪಾರುಪತ್ಯ ಬಿಜೆಪಿ ಕೈಯ್ಯಲ್ಲೇ ಇದೆ. ಉಮೇಶ್ ಕತ್ತಿ ಸಹೋದರ ಮಾಜಿ ಸಂಸದ ರಮೇಶ್ ಕತ್ತಿ ಕಳೆದ ನಾಲ್ಕು ಬಾರಿಯೂ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿದ್ದಾರೆ. ಈ ಬಾರಿಯು ಅಧ್ಯಕ್ಷರಾಗಿ ಮುಂದುವರಿಯುವ ಬಗ್ಗೆ ಕತ್ತಿ ಸಹೋದರರು ಪಣ ತೊಟ್ಟಿದ್ದಾರೆ. ಆದರೆ, ಡಿಸಿಎಂ ಲಕ್ಷ್ಮಣ್ ಸವದಿ ಹಿಡಿತ ಸಾಧಿಸಲು ಕಾರ್ಯತಂತ್ರ ರೂಪಿಸಿದ್ದಾರೆ. ಅದರಂತೆ ಡಿಸಿಎಂ ಲಕ್ಷ್ಮಣ ಸವದಿ ಸೇರಿ, ಅವರ ಬಣದ ಖಾನಾಪುರ ತಾಲೂಕಿನಿಂದ ಅರವಿಂದ ಪಾಟೀಲ್, ಕಿತ್ತೂರು ತಾಲೂಕಿನಿಂದ ಮಹಾಂತೇಶ್ ದೊಡ್ಡಗೌಡರ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ ಡಿಸಿಎಂ ಸವದಿ ಪರ ಬ್ಯಾಟಿಂಗ್ ಮಾಡಿದ್ದು, ಅವರ ಪತಿ ಹಾಗೂ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ವಿಧಾನಸಭೆ ಉಪಸಭಾಧ್ಯಕ್ಷ ವಿಶ್ವನಾಥ್ ಮಾಮನಿ, ರಾಜೇಂದ್ರ ಅನ್ಕಲಗಿ, ಜಾರಕಿಹೊಳಿ ಕುಟುಂಬದ ಆಪ್ತ ಶಿವಾನಂದ ಡೋನಿ ಕಣದಲ್ಲಿರುವ ಪ್ರಮುಖರಾಗಿದ್ದಾರೆ. ಕಾಂಗ್ರೆಸ್​ನಿಂದ ಶಾಸಕಿ ಅಂಜಲಿ ನಿಂಬಾಳ್ಕರ್ ನಾಮಪತ್ರ ಸಲ್ಲಿಸಿದ್ದಾರೆ.

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಪಕ್ಷ ರಾಜಕೀಯಕ್ಕಿಂತ ವ್ಯಕ್ತಿ ರಾಜಕೀಯವೇ ಹೆಚ್ಚು ಚಲಾವಣೆಯಾಗುತ್ತದೆ. ಆದರೆ, ಇದರ ಫಲಿತಾಂಶ ಮಾತ್ರ ರಾಜ್ಯ ರಾಜಕೀಯದ ಮೇಲೂ ಪರಿಣಾಮ ಬೀರುವಷ್ಟು ಪ್ರಾಬಲ್ಯ ಹೊಂದಿದೆ. ಅದರಲ್ಲೂ ಬೆಳಗಾವಿ ರಾಜಕೀಯದಲ್ಲಿ ಡಿಸಿಸಿ ಬ್ಯಾಂಕ್ ನಿರ್ಣಾಯಕವಾಗಿದೆ. ಇದರ ಮೇಲಿನ‌ ಪಾರುಪತ್ಯ ಚುನಾವಣೆಯಲ್ಲಿನ ಸೋಲು ಗೆಲುವಿನ ಲೆಕ್ಕಾಚಾರ ನಿರ್ಧರಿಸುತ್ತದೆ.

ರಾಜ್ಯ ರಾಜಕೀಯವನ್ನೇ ಏರು ಪೇರು ಮಾಡುವಷ್ಟು ಪ್ರಬಲವಾಗಿರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ ಬಿಜೆಪಿ ರಾಜ್ಯ ನಾಯಕರು, ಆರ್​ಎಸ್​ಎಸ್ ಮುಖಂಡರುಗಳೇ ಎಂಟ್ರಿ ಕೊಡುತ್ತಾರೆ. ಚುನಾವಣೆಯ ಜಿದ್ದಾಜಿದ್ದು, ಪ್ರತಿಷ್ಠೆ ಪಕ್ಷಕ್ಕೆ, ಸರ್ಕಾರಕ್ಕೆ ಇರಿಸು ಮುರಿಸು ತರಿಸಬಾರದು ಎಂಬ ಕಾರಣಕ್ಕಾಗಿ ಈ ಬಾರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಆರ್​ಎಸ್​ಎಸ್ ಮುಖಂಡರು ಬೆಳಗಾವಿ ಘಟಾನುಘಟಿ ನಾಯಕರನ್ನು ಕೂರಿಸಿ ಸಂಧಾನ ಮಾಡಲು ಯತ್ನಿಸಿದ್ದಾರೆ. ಚುನಾವಣೆ ನಡೆಯದೇ ಅವಿರೋಧ ಆಯ್ಕೆ ಖಾತ್ರಿ ಪಡಿಸಲು ಕಸರತ್ತು ನಡೆಸುತ್ತಿದ್ದಾರೆ.

ABOUT THE AUTHOR

...view details