ಕರ್ನಾಟಕ

karnataka

ETV Bharat / state

ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆಯಾಕಾಗಿಲ್ಲ: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ - High Court Questions Govt

ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಇದುವರೆಗೆ ಆರೋಪಿತರಿಗೆ ಶಿಕ್ಷೆ ಆಗದಿರುವುದಕ್ಕೆ ಹೈಕೋರ್ಟ್​ ತೀವ್ರ ವಿಷಾದ ವ್ಯಕ್ತಪಡಿಸಿದೆ. ಅಲ್ಲದೆ, ಜ. 30 ರೊಳಗೆ ವರದಿ ಸಲ್ಲಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

why-the-accused-have-not-been-punished-under-the-manual-scavengers-act-asks-high-court
ಮಲ ಹೊರುವ ವೃತ್ತಿ ನಿಷೇಧ ಕಾಯಿದೆಯಡಿ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆಯಾಕಾಗಿಲ್ಲ ? : ಹೈಕೋರ್ಟ್ ಸರ್ಕಾರಕ್ಕೆ ಪ್ರಶ್ನೆ

By ETV Bharat Karnataka Team

Published : Jan 8, 2024, 7:35 PM IST

Updated : Jan 18, 2024, 12:57 PM IST

ಬೆಂಗಳೂರು :ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆ ಉಲ್ಲಂಘಿಸಿ ಕೆಳ ಜಾತಿಗಳ ವ್ಯಕ್ತಿಗಳಿಂದ ಮಲದ ಗುಂಡಿಗಳ ಸ್ವಚ್ಛಗೊಳಿಸುವುದಕ್ಕೆ ಕಾರಣರಾದವರ ವಿರುದ್ಧ ದಾಖಲಾದ ಪ್ರಕರಣದಲ್ಲಿ ಈವರೆಗೆ ಒಂದೂ ಶಿಕ್ಷೆಯಾಗದ ಕ್ರಮಕ್ಕೆ ಹೈಕೋರ್ಟ್ ತೀವ್ರ ವಿಷಾದ ವ್ಯಕ್ತಪಡಿಸಿದೆ. ಈ ರೀತಿಯ ಪ್ರಕರಣಗಳಲ್ಲಿ ಸರ್ಕಾರದ ಪರ ವಾದ ಮಂಡಿಸಿದ್ದ ವಕೀಲರ(ಪಿಪಿ) ವಿರುದ್ಧ ಕೈಗೊಂಡಿರುವ ಕ್ರಮಗಳೇನು ಎಂದು ಕೋರ್ಟ್​ ಪ್ರಶ್ನಿಸಿದೆ.

ಯಂತ್ರೋಪಕರಣಗಳಿದ್ದರೂ ಮನುಷ್ಯರನ್ನು ಮಲ ಗುಂಡಿಗಳ ಸ್ವಚ್ಛತೆಗೆ ಬಳಕೆ ಮಾಡಿರುವ ಸಂಬಂಧ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನ್ಯಾಯಪೀಠ, ವಿಚಾರಣೆ ವೇಳೆ ಹಾಜರಿದ್ದ ರಾಜ್ಯ ಅಡ್ವೋಕೇಟ್ ಜನರಲ್ ಅವರನ್ನು ಈ ಬಗ್ಗೆ ಪ್ರಶ್ನಿಸಿತು. ಕಾಯ್ದೆ ಉಲ್ಲಂಘಿಸಿದ ವ್ಯಕ್ತಿಗಳ ವಿರುದ್ಧ ದಾಖಲಾಗುವ ಪ್ರಕರಣಗಳಲ್ಲಿ ಆರೋಪಿತರನ್ನು ಶಿಕ್ಷೆಗೆ ಗುರಿಪಡಿಸಲಾಗಿಲ್ಲ. ಈ ರೀತಿಯ ಪ್ರಕರಣಗಳನ್ನು ಪೊಲೀಸರು ಮತ್ತು ಸರ್ಕಾರಿ ವಕೀಲರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಪೀಠ ತಿಳಿಸಿದೆ.

ಅಲ್ಲದೆ, ಸಣ್ಣ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಆದರೆ, ಗಂಭೀರ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಈವರೆಗೆ ದಾಖಲಾಗಿರುವ ಪ್ರಕರಣದಲ್ಲಿ ಸರ್ಕಾರದ ವಕೀಲರು ಕಳಪೆ ಗುಣಮಟ್ಟದಲ್ಲಿ ವಾದ ಮಂಡಿಸಿರುತ್ತಾರೆ ಎಂದ ನ್ಯಾಯಪೀಠ, ಈ ರೀತಿಯ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಶೂನ್ಯವಾಗಲು ಕಾರಣವೇನು? ಶಿಕ್ಷೆಯಾಗದಿರಲು ಕಾರಣವೇನು? ಇದಕ್ಕೆ ಪರಿಹಾರವೇನು? ಅಂತಹ ಕಳಪೆ ಗುಣಮಟ್ಟದ ವಕೀಲರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿತು.

ಇಂತಹ ದೊಡ್ಡ ಪ್ರಕರಣಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡುವಂತಾಗಿದೆ. ರಿಟ್ ಅರ್ಜಿಗಳ ವಿಚಾರಣೆ ಮಾಡುವುದು ನ್ಯಾಯಾಲಯಗಳ ಕಾರ್ಯವಲ್ಲ. ಹೈಕೋರ್ಟ್ ಯಾಕೆ ಈ ರೀತಿಯ ವಿಚಾರಗಳಲ್ಲಿ ನಿರ್ದೇಶನ ನೀಡಬೇಕು ಎಂದು ಪೀಠ ಪ್ರಶ್ನಿಸಿತು. ಅಷ್ಟೇ ಅಲ್ಲದೆ, ಸರ್ಕಾರ ಮಾಡುವ ತಪ್ಪಿಗೆ ಕೆಳ ಹಂತದ ಅಧಿಕಾರಿಗಳನ್ನು ಎಳೆದು ತಂದರೆ ಏನು ಸುಧಾರಣೆ ಕಾಣುವುದಿಲ್ಲ. ಈ ರೀತಿಯ ಪ್ರಕರಣಗಳಲ್ಲಿ ಕಾರ್ಯದರ್ಶಿ ಹಂತದ ಅಧಿಕಾರಿಗಳನ್ನು ಬಂಧಿಸದಿದ್ದರೆ ಯಾವುದೇ ಪ್ರಯೋಜನ ಸಿಗುವುದಿಲ್ಲ ಎಂದು ಪೀಠ ಎಚ್ಚರಿಸಿತು.

ವಿಚಾರಣೆ ವೇಳೆ ಹಾಜರಿದ್ದ ಪ್ರಕರಣದಲ್ಲಿ ಅಮೈಕಸ್​ ಕ್ಯೂರಿ ಆಗಿರುವ ಶ್ರೀಧರ್ ಪ್ರಭು, ಮಲ ಹೊರುವ ಪ್ರಕರಣಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲು ಅವಕಾಶವಿಲ್ಲ. ಅವರು ತಪ್ಪಿತಸ್ಥ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡಲು ಎಸ್ಸಿ / ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲು ಅವಕಾಶ ಕಲ್ಪಿಸಬೇಕು. ಅಲ್ಲದೆ, ಕೈಯಿಂದ ಮಲ ಗುಂಡಿ ಸ್ವಚ್ಛಗೊಳಿಸುವವರಿಗೆ ಪುನರ್ವಸತಿ ಕಲ್ಪಿಸಬೇಕು. ಜತೆಗೆ, ಮಲ ಗುಂಡಿಗಳ ಸ್ವಚ್ಛತೆಗೆ ತಂತ್ರಜ್ಞಾನವನ್ನು ಪರಿಚಯಿಸಬೇಕು ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡಕ್ಕೂ ಇಂತಹ ತಂತ್ರಜ್ಞಾನವನ್ನು ಹಂತ ಹಂತವಾಗಿ ಜಾರಿ ಮಾಡಲಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು. ಈ ವೇಳೆ ನ್ಯಾಯಪೀಠ, ಯಾಂತ್ರಿಕ ವಿಧಾನವನ್ನು ಅಳವಡಿಸಿಕೊಳ್ಳುವುದಕ್ಕೆ ಬದಲಾಗಿ ಎಲ್ಲದಕ್ಕೂ ಅಡ್ಡಿ ಮಾಡುವುದು ಸಾಮಾನ್ಯವಾಗುತ್ತಿದೆ. ಈ ಪ್ರವೃತ್ತಿ ಬದಲಾಗಿ ತಂತ್ರಜ್ಞಾನ ಅಳವಡಿಕೆಯಂತ ಕಾರ್ಯಗಳಿಗೆ ಇಚ್ಛಾಶಕ್ತಿ ತೋರಿಸುವಂತಾಗಬೇಕು ಎಂದು ಪೀಠ ತಿಳಿಸಿತು. ಅಲ್ಲದೆ, ಮಲ ಗುಂಡಿಗಳ ಸ್ವಚ್ಛತೆ ಮಕ್ಕಳ ಬಳಕೆ ಮಾಡಿರುವ ಸಂಬಂಧ ದಾಖಲಾಗಿರುವ ಅರ್ಜಿಯನ್ನು ಸ್ವಯಂಪ್ರೇರಿತ ಅರ್ಜಿಯೊಂದಿಗೆ ವಿಚಾರಣೆ ನಡೆಸುವುದಾಗಿ ಪೀಠ ತಿಳಿಸಿತು. ಪ್ರಕರಣಗಳ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನವರಿ 30ರ ಒಳಗಾಗಿ ಸಮಗ್ರವಾದ ವರದಿ ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.

ಇದನ್ನೂ ಓದಿ :ಉಡುಪಿ ಮಠಗಳ ಪರ್ಯಾಯ ಮಹೋತ್ಸವಕ್ಕೆ ಮಾರ್ಗಸೂಚಿ ರಚಿಸಲು ಕೋರಿ ಅರ್ಜಿ: ಮಧ್ಯಪ್ರವೇಶಕ್ಕೆ ಹೈಕೋರ್ಟ್ ನಕಾರ

Last Updated : Jan 18, 2024, 12:57 PM IST

ABOUT THE AUTHOR

...view details