ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಮುನ್ನುಡಿ ಎಂಬಂತೆ ಇತ್ತೀಚಿಗೆ ದೊಡ್ಡಬಳ್ಳಾಪುರ ಬಳಿ ಬಿಜೆಪಿ ಜನಸ್ಪಂದನ ಸಮಾವೇಶ ಮಾಡಿದ ಸಂಗತಿ ಗೊತ್ತಿರುವ ಸಂಗತಿ. ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ-ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಎಂಬ ಟ್ಯಾಗ್ ಲೈನ್ ಬಳಸಿ ಮಾಡಿದ ಕಾರ್ಯಕ್ರಮ ಕಾಂಗ್ರೆಸ್ ಗೆ ಸಂದೇಶ ನೀಡಿತು.
ರಾಜ್ಯದ ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿದ್ದ ಕಾಲದಲ್ಲಿ ಲೂಟಿ ಮಾಡಿ ಎಲ್ಲೆಲ್ಲಿ ಹಣ ಇಟ್ಟಿದ್ದಾರೆ?. ಹೇಗೆ ಬಳಕೆ ಮಾಡುತ್ತಿದ್ದಾರೆ? ಎಂಬುದು ನಮಗೆ ಗೊತ್ತು. ಚುನಾವಣೆ ಹತ್ತಿರ ಬರಲಿ. ಅದನ್ನೆಲ್ಲ ಬಹಿರಂಗಪಡಿಸುತ್ತೇವೆ ಎಂದು ಬಿಜೆಪಿ ನಾಯಕರು ಗುಡುಗಿದ್ದರು. ಸಮಾವೇಶದಲ್ಲಿ ಮಾತಮಾಡಿದ ಬಹುತೇಕ ನಾಯಕರು ಕಾಂಗ್ರೆಸ್ನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು.
ಜೆಡಿಎಸ್ ವಿರುದ್ಧ ಬಿಜೆಪಿ ತಿರುಗಿ ಧ್ವನಿ ಎತ್ತಿಲ್ಲ: ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ ಜನಸ್ಪಂದನ ಸಮಾವೇಶದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದರೇ ಹೊರತು ಜೆಡಿಎಸ್ ಮೇಲೆ ಒಂದೇ ಒಂದು ಮಾತನ್ನೂ ಆಡಲಿಲ್ಲ. ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ, ಬಿಜೆಪಿ ಮತ್ತು ಸಂಘ ಪರಿವಾರವನ್ನು ಟೀಕಿಸುತ್ತಾರೆ. ಆದರೆ, ಬಿಜೆಪಿ ಮಾತ್ರ ತಿರುಗಿ ಜೆಡಿಎಸ್ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಅದು ಸಣ್ಣ-ಪುಟ್ಟ ನಾಯಕರಿಂದ, ಪಕ್ಷದ ಸೋಷಿಯಲ್ ಮೀಡಿಯಾ ಮೂಲಕ ಪ್ರತಿ ಹೇಳಿಕೆ ಕೊಡಿಸಿ ಜಾಣ ಮರೆವಿಗೆ ಜಾರುತ್ತಿದೆ.
ಬಿಜೆಪಿ ನಾಯಕರ ಈ ಮೃದು ಧೋರಣೆಗೂ ಒಂದು ಕಾರಣವಿದೆ. ಏನೆಂದರೆ, ಕುಮಾರಸ್ವಾಮಿ ತಮ್ಮನ್ನು ಎಷ್ಟು ಟೀಕಿಸುತ್ತಾರೋ?. ಕಾಂಗ್ರೆಸ್ಗೆ ಅಷ್ಟರ ಮಟ್ಟಿಗೆ ಹಾನಿಯಾಗುತ್ತದೆ. ಹೀಗಾಗಿ ಕುಮಾರಸ್ವಾಮಿ ತಮ್ಮನ್ನು ಎಷ್ಟು ಬೇಕಾದರೂ ಟೀಕಿಸಲಿ ಎಂಬುದು ಬಿಜೆಪಿ ನಾಯಕರ ಯೋಚನೆ. ಕುತೂಹಲದ ಸಂಗತಿ ಎಂದರೆ ಜನಸ್ಪಂದನ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಿದ ಮಾತು.
ಇದನ್ನೂ ಓದಿ:ದೊಡ್ಡಬಳ್ಳಾಪುರ ಬಿಜೆಪಿ ಜನಸ್ಪಂದನ: ಪಕ್ಷಕ್ಕೆ ನೆಲೆ ಇಲ್ಲದೆಡೆ ಬಲ ಪ್ರದರ್ಶಿಸಿ ಸೈ ಎನಿಸಿಕೊಂಡ ವಲಸಿಗ ಸಚಿವರು
ಅವರ ಪ್ರಕಾರ 2018ರಲ್ಲಿಯೇ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಬೇಕಿತ್ತು. ಆದರೆ, ಕಾಂಗ್ರೆಸ್ ಪಕ್ಷ ವಾಮಮಾರ್ಗದ ಮೂಲಕ ಜೆಡಿಎಸ್ ಜೊತೆ ಕೈಗೂಡಿಸಿ ಸರ್ಕಾರ ರಚಿಸಿತಂತೆ. ಆದರೆ, ಇದರಲ್ಲಿ ವಾಮ ಮಾರ್ಗದ ಪ್ರಶ್ನೆ ಏನಿದೆ?. ಸಂವಿಧಾನ ಬದ್ಧವಾಗಿಯೇ ಅವತ್ತು ಕಾಂಗ್ರೆಸ್-ಜೆಡಿಎಸ್ ಕೈಗೂಡಿಸಿದವಲ್ಲ?.
ಅತ್ಯಂತ ದೊಡ್ಡ ಶಕ್ತಿಯಾಗಿತ್ತು ಎಂದ ಮಾತ್ರಕ್ಕೆ ಬಹುಮತವಿಲ್ಲದಿದ್ದರೂ ಬಿಜೆಪಿಗೆ ಅಧಿಕಾರ ನೀಡಬೇಕಿತ್ತು ಅಂತ ಇದರರ್ಥವೇ? ಅಥವಾ ಜೆಡಿಎಸ್ ಪಕ್ಷದ ಜೊತೆ ಕೈಗೂಡಿಸಬೇಕಿದ್ದುದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ ಎಂಬುದೇ?, ಈ ಮಾತನ್ನು ಆಳವಾಗಿ ಗಮನಿಸಿದರೆ ಭವಿಷ್ಯದಲ್ಲಿ ಮಿತ್ರ ಪಕ್ಷಗಳಾಗುವುದಿದ್ದರೆ ಅದು ಬಿಜೆಪಿ-ಜೆಡಿಎಸ್ ಹೊರತು ಕಾಂಗ್ರೆಸ್ - ಜೆಡಿಎಸ್ ಅಲ್ಲ ಎಂಬುದು ಬಿಜೆಪಿಯ ಯೋಚನೆ ಇದ್ದಂತೆ ಕಾಣುತ್ತಿದೆ.
ಜೆಡಿಎಸ್ ಧರಣಿಯಿಂದ ಕಾಂಗ್ರೆಸ್ಗೆ ಹಿನ್ನಡೆ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಯಾವ್ಯಾವ ಮೂಲೆಗಳಿಂದ ಕಟ್ಟಿ ಹಾಕಬೇಕು ಎಂಬ ವಿಷಯದಲ್ಲಿ ಬಿಜೆಪಿ ಖಚಿತ ತೀರ್ಮಾನಕ್ಕೆ ಬಂದಿದೆ. ಇನ್ನೊಂದು ತಾಜಾ ಉದಾಹರಣೆ ಎಂದರೆ ಗುರುವಾರ ಸದನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಎಂಎಸ್ ಟ್ರಸ್ಟ್ ಅಕ್ರಮದ ಕುರಿತು ದಾಖಲೆ ಸಮೇತ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ವಿರುದ್ಧ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟರು. ಆಗ ಮುಖ್ಯಮಂತ್ರಿ ಆದಿಯಾಗಿ ಯಾರೊಬ್ಬ ಸಚಿವರು ಸಹ ತುಟಿ ಬಿಚ್ಚಲಿಲ್ಲ. ಧರಣಿ ನಡೆಸುವ ಮೂಲಕ ಜೆಡಿಎಸ್ ತನಿಖೆಗೆ ಆಗ್ರಹಿಸಿತು.
ಈ ಸಂದರ್ಭದಲ್ಲಿ ಸಚಿವ ಅಶ್ವತ್ಥ ನಾರಾಯಣ ಅವರು ಸ್ಪಷ್ಟೀಕರಣ ಕೊಟ್ಟರೂ ಸಹ ಧರಣಿ ಮುಂದುವರಿಸಿದ ಜೆಡಿಎಸ್ ಸದಸ್ಯರು, ಸಚಿವರ ರಾಜೀನಾಮೆಗೆ ಹಾಗೂ ತನಿಖೆಗೆ ಪಟ್ಟುಹಿಡಿದರು. ಆದರೆ, ಇದಕ್ಕೆ ಸರ್ಕಾರ ಮಣಿಯಲಿಲ್ಲ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು, ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಕುರಿತು ಸದನದಲ್ಲಿ ಮಾತನಾಡಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಸಿದ್ದತೆ ಮಾಡಿಕೊಂಡಿದ್ದರು. ಆದರೆ, ಜೆಡಿಎಸ್ ಧರಣಿಯಿಂದ ಕಾಂಗ್ರೆಸ್ಗೆ ಹಿನ್ನಡೆಯಾಯಿತು. ಇದು ಒಂದು ರೀತಿಯಲ್ಲಿ ಬಿಜೆಪಿಗೆ ಅನುಕೂಲವೇ ಆಯಿತು.
ಕರ್ನಾಟಕದಲ್ಲಿ ಐಟಿ ಮತ್ತು ಇಡಿ ಚುರುಕು: ಮುಂದಿನ ದಿನಗಳಲ್ಲಿ ಐಟಿ, ಇಡಿಯಂತಹ ತನಿಖಾ ಸಂಸ್ಥೆಗಳು ಕರ್ನಾಟಕದಲ್ಲಿ ತುಂಬ ಚುರುಕಾಗಲಿವೆ. ಅವುಗಳ ಹಸ್ತ ಕಾಂಗ್ರೆಸ್ ಪಕ್ಷದ ಹಲವು ನಾಯಕರಗೆ ಕಂಟಕವಾಗುತ್ತದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಹೀಗೆ ಅವು ಚುರುಕಾಗದೇ ಇದ್ದರೆ ಬಸವರಾಜ ಬೊಮ್ಮಾಯಿ ಹೇಳಿದ್ದು ನಿಜವಾಗುವುದು ಹೇಗೆ?. ಹೀಗಾಗಿ ಅವರ ಮಾತು ಮುಂದಿನ ವಿಧಾನಸಭಾ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಸಂಘರ್ಷ ನಡೆಯುವುದು ನಿಶ್ಚಿತ ಎಂಬುದನ್ನು ಸಂಕೇತಿಸುತ್ತಿದೆ.
ಇದನ್ನೇ ಜನಸ್ಪಂದನ ಸಮಾವೇಶದಲ್ಲಿ ಸಿಎಂ ಸೂಚ್ಯವಾಗಿ ಹೇಳಿದರು. ಅಂದರೆ, ಕರ್ನಾಟಕದಲ್ಲಿ ವೇಗವಾಗಿ ಓಡುತ್ತಿರುವ ಕಾಂಗ್ರೆಸ್ನ ಅಶ್ವಮೇಧದ ಕುದುರೆಯನ್ನು ಹೇಗೆ ತಡೆಯಬೇಕು ಎಂಬ ಬಗ್ಗೆ ಬಿಜೆಪಿ ತಂತ್ರ ರೂಪಿಸುತ್ತಿದೆ. ಇದು ಗೊತ್ತಿರುವುದರಿಂದಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೀರಾವೇಶ ಪ್ರದರ್ಶಿಸಿದ್ದಾರೆ.