ಬೆಂಗಳೂರು:ರಾಜೀವ್ ಗಾಂಧಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ನಿಲುವನ್ನು ಟೀಕಿಸಿ ಹೇಳಿಕೆ ನೀಡಿರುವ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ವಿರುದ್ಧ ರಾಜ್ಯದ ನಾಯಕರು ಗರಂ ಆಗಿದ್ದಾರೆ. ಮೋದಿಯನ್ನು ಸಮರ್ಥಿಸಿಕೊಳ್ಳುವ ಬದಲು ವಿರೋಧಿಸಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ ಎಂದು ತಿಳಿದು ಬಂದಿದೆ.
ನೆಹರೂ ಕುಟುಂಬದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಪರ ರಾಜ್ಯದ ಬಿಜೆಪಿ ನಾಯಕರು ಬ್ಯಾಟಿಂಗ್ ಮಾಡುತ್ತಿದ್ದರೆ, ಇತ್ತ ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಹೇಳಿಕೆ ನೀಡುವ ಮೂಲಕ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೋದಿ ಹೇಳಿಕೆಯನ್ನು ಬಹಿರಂಗವಾಗಿ ಆಕ್ಷೇಪಿಸುವ ಮೂಲಕ ಪಕ್ಷದ ಚೌಕಟ್ಟು ಮೀರಿದ್ದಾರೆ ಎಂದು ಪಕ್ಷದ ಒಳಗೆ ಅಸಮಾಧಾನ ವ್ಯಕ್ತವಾಗಿದೆ ಎಂಬ ಕೂಗು ಜೋರಾಗೇ ಸದ್ದು ಮಾಡುತ್ತಿದೆ.
ಪ್ರಸಾದ್ ಅವರ ಈ ಹೇಳಿಕೆ ಆತಂಕ ತಂದಿದ್ದೇಕೆ?
ರಾಜ್ಯದಲ್ಲಿ ಲೋಕಸಭಾ ಕದನ ಮುಗಿದಿರುವ ಕಾರಣ ಇಲ್ಲಿ ಅವರ ಹೇಳಿಕೆ ಪರಿಣಾಮ ಬೀರದೇ ಇದ್ದರೂ ದೇಶದಲ್ಲಿ ಇನ್ನೂ ಎರಡು ಹಂತದ ಚುನಾವಣೆ ನಡೆಯಬೇಕಿರುವುದರಿಂದ ರಾಷ್ಟ್ರ ಮಟ್ಟದಲ್ಲಿ ಈ ಹೇಳಿಕೆ ಪರಿಣಾಮ ಬೀರಲಿದೆ ಎನ್ನುವುದು ಬಿಜೆಪಿ ರಾಜ್ಯ ನಾಯಕರ ಲೆಕ್ಕಾಚಾರ. ಸ್ವ ಪಕ್ಷೀಯ ನಾಯಕರಿಂದಲೇ ಮೋದಿ ಹೇಳಿಕೆಗೆ ಖಂಡನೆ ವ್ಯಕ್ತವಾಗಿರುವುದು ಪ್ರತಿಪಕ್ಷ ಕಾಂಗ್ರೆಸ್ಗೆ ರಾಜಕೀಯ ಅಸ್ತ್ರ ಸಿಕ್ಕಂತಾಗುತ್ತದೆ ಎನ್ನುವುದು ಬಿಜೆಪಿ ರಾಜ್ಯ ನಾಯಕರ ಲೆಕ್ಕಾಚಾರ. ಸದ್ಯ ಚಿಂಚೋಳಿ ಹಾಗೂ ಕುಂದಗೋಳ ಉಪಚುನಾವಣಾ ಪ್ರಚಾರದಲ್ಲಿ ರಾಜ್ಯ ನಾಯಕರು ತಮ್ಮನ್ನು ತೊಡಗಿಸಿಕೊಂಡಿದ್ದು, ಬಿಡುವಿಲ್ಲದ ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಶ್ರೀನಿವಾಸ ಪ್ರಸಾದ್ ಹೇಳಿಕೆಯನ್ನು ಯಾರೂ ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಚುನಾವಣೆ ಬಳಿಕ ಈ ಹೇಳಿಕೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಬಿಜೆಪಿ ಆಪ್ತ ಮೂಲಗಳು ತಿಳಿಸಿವೆ.