ಬೆಂಗಳೂರು:ಕೊರೊನಾ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ವಕೀಲರ ಕ್ಲರ್ಕ್ಗಳಿಗೆ ಪ್ರತ್ಯೇಕವಾಗಿ ಪರಿಹಾರ ನೀಡಲು ಸಾಧ್ಯವಾಗದಿರುವುದಕ್ಕೆ ಕಾರಣ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರ ಕ್ಲರ್ಕ್ಗಳಿಗೆ ಪರಿಹಾರ ಕೋರಿ ಕರ್ನಾಟಕ ರಾಜ್ಯ ವಕೀಲರುಗಳ ಗುಮಾಸ್ತರ ಸಂಘ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ವಿಚಾರಣೆ ವೇಳೆ ರಾಜ್ಯ ವಕೀಲರ ಪರಿಷತ್ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ. ಸಂಕಷ್ಟದಲ್ಲಿರುವ ವಕೀಲರಿಗೆ ನೆರವು ನೀಡಲು ಸರ್ಕಾರ 5 ಕೋಟಿ ರೂಪಾಯಿ ಪರಿಹಾರ ನೀಡಿದೆ. ಪರಿಹಾರ ಕೋರಿ ವಕೀಲರಿಂದ 4,300 ಅರ್ಜಿಗಳು ಬಂದಿವೆ. ಇದೇ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪರಿಷತ್ತಿಗೆ ಪತ್ರ ಬರೆದಿದ್ದು, ಇದೇ ಹಣದಲ್ಲಿ ವಕೀಲರ ಗುಮಾಸ್ತರಿಗೆ ಪರಿಹಾರ ನೀಡುವಂತೆ ತಿಳಿಸಿದ್ದಾರೆ. ಈ ಹಣದಲ್ಲಿ ವಕೀಲರು ಮತ್ತು ಗುಮಾಸ್ತರಿಗೆ ಎಷ್ಟೆಷ್ಟು ಹಣ ಬಳಸಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಇದನ್ನು ಸರ್ಕಾರವೇ ಸ್ಪಷ್ಟಪಡಿಸಬೇಕು ಎಂದು ವಿವರಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ಗುಮಾಸ್ತರಿಗೆ ಪರಿಹಾರ ಕಲ್ಪಿಸಲು ಹೈಕೋರ್ಟ್ ನೀಡಿರುವ ಸೂಚನೆಗಳನ್ನು ಪಾಲಿಸಲು ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ. ಹಾಗೆಯೇ ಧಾರವಾಡ, ಬೆಳಗಾವಿ, ಬೆಂಗಳೂರು ಮತ್ತು ಕಲಬುರಗಿ ವಕೀಲರ ಸಂಘಗಳ ಮನವಿ ಪತ್ರಗಳನ್ನು ಏಕೆ ಪರಿಗಣಿಸಿಲ್ಲ ಎಂಬ ಬಗ್ಗೆ ಸರ್ಕಾರ ಕಾರಣ ನೀಡಬೇಕು ಎಂದು ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ಮುಂದೂಡಿತು.