ಬೆಂಗಳೂರು : ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪರನ್ನು ಏಕಾಏಕಿ ರಾಜ್ಯ ನಾಯಕರ ಅಭಿಪ್ರಾಯ ಆಲಿಸದೇ ಕೆಳಗಿಳಿಸಿದಾಗ ಮೌನವಾಗಿದ್ದವರು ಈಗೇಕೆ ಮೈತ್ರಿ ವಿಚಾರದಲ್ಲಿ ನಮ್ಮ ಅಭಿಪ್ರಾಯ ಕೇಳಬೇಕಿತ್ತು ಎನ್ನುತ್ತಿದ್ದಾರೆ ಎಂದು ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರದಲ್ಲಿ ಅಸಮಾಧಾನ ಹೊರಹಾಕಿರುವ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡರನ್ನು ಮಾಜಿ ಸಚಿವ ಮುನಿರತ್ನ ಪ್ರಶ್ನಿಸಿದ್ದಾರೆ.
ವೈಯಾಲಿಕಾವಲ್ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬದಲಾವಣೆ ಬಗ್ಗೆ ಕೇಳದವರು, ಇಂದು ಮೈತ್ರಿ ಬಗ್ಗೆ ಯಾಕೆ ಕೇಳ್ತಾರೆ. ಸಿಎಂ ಬದಲಾವಣೆ ಮಾಡಿದಾಗಲೇ ಮಾತನಾಡಿಲ್ಲ. ಅಂದು ಕೂಡ ಹೈಕಮಾಂಡ್ ನಮ್ಮನ್ನೂ ಒಂದು ಮಾತು ಕೇಳಬೇಕಿತ್ತು ಎಂದು ಹೇಳಬಹುದಿತ್ತಲ್ಲ. ಈಗ ಮೈತ್ರಿ ಬಗ್ಗೆ ಹೈಕಮಾಂಡ್ ಕೇಳಬೇಕಿತ್ತು ಎಂದು ಯಾಕೆ ಹೇಳುತ್ತೀರಿ?. ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದಲ್ಲಿ ಯಾರನ್ನೂ ಹೊರಗಿಟ್ಟಿಲ್ಲ. ಯಡಿಯೂರಪ್ಪ ಬದಲಾವಣೆ ವೇಳೆ ಯಾರನ್ನೂ ಕೇಳಲಿಲ್ಲ. ಆಗಲೂ ನಾವು ಒಪ್ಪಿದ್ದೇವೆ. ಯಡಿಯೂರಪ್ಪ ಮೇಲೆ ಅಭಿಮಾನ ಇದ್ದವರು ಕೇಳಬಹುದಿತ್ತು ಎಂದರು.
ಸೋಮಣ್ಣನಿಗೆ ಅನ್ಯಾಯವಾಗಿದೆ: ಮಾಜಿ ಸಚಿವ ವಿ.ಸೋಮಣ್ಣ ಅಸಮಾಧಾನಗೊಂಡಿದ್ದಾರೆ. ಸೋಮಣ್ಣಗೆ ಅನ್ಯಾಯ ಆಗಿರುವುದು ನಿಜ. ಅವರು ಒಳ್ಳೆಯ ಹೆಸರು ಇರುವ ವ್ಯಕ್ತಿ. ಅವರಿಗೆ ಎರಡು ಕ್ಷೇತ್ರದ ಬದಲು ಒಂದು ಕ್ಷೇತ್ರ ಕೊಡಬಹುದಿತ್ತು. ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ಪಕ್ಷ ಕೊಡುತ್ತದೆ ಎನ್ನುವ ವಿಶ್ವಾಸ ಇದೆ. ಸೋಮಣ್ಣ ಬಗ್ಗೆ ನನಗೆ ಅಭಿಮಾನ ಇದೆ ಎಂದು ಹೇಳಿದರು.
ಆರ್.ಆರ್.ನಗರ ವಾರ್ಡ್ಗೆ ಅನುದಾನ ಬಿಡುಗಡೆ ಮಾಡದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಮುನಿರತ್ನ, 198 ವಾರ್ಡ್‌ಗಳ ಕಾಮಗಾರಿ ಎಸ್ಐಟಿ ತನಿಖೆಗೆ ನೀಡಿದ್ದಾರೆ. ಎಲ್ಲಾ ವಾರ್ಡ್‌ಗಳ ಇನ್ಸ್‌ಪೆಕ್ಷನ್ ಮಾಡಿದ್ದಾರೆ. ಎಸ್ಐಟಿ ಚೆನ್ನಾಗಿದೆ ಅಂತ ಹೇಳಿದ ಮೇಲೆ ಹಣ ಬಿಡುಗಡೆ ಮಾಡಿದ್ದಾರೆ. ಆದರೆ ನಮ್ಮ ಕ್ಷೇತ್ರದ ಒಂದು ವಾರ್ಡ್ ಕಂಪ್ಲೆಂಟ್ ನಾನೇ ಕೊಟ್ಟಿದ್ದೆ. ಆದರೆ ನನ್ನ ಕ್ಷೇತ್ರದ 9 ವಾರ್ಡಿಗೆ ಅನುದಾನ ನೀಡಿಲ್ಲ. ಎಸ್ಐಟಿ ಯಾವ ರೀತಿ ತನಿಖೆ ಆಗಿದೆ ನಾನು ತರಿಸಿ ನೋಡುತ್ತೇನೆ. ಡಿಸಿಎಂ ಸಹೋದರ ನಮ್ಮ ಕ್ಷೇತ್ರದ ಲೋಕಸಭಾ ಪ್ರತಿನಿಧಿ ಅವರು ಪ್ರತಿನಿಧಿಸುವ ಕ್ಷೇತ್ರಕ್ಕೆ ಅನುದಾನ ಕೊಟ್ಟಿಲ್ಲ. ಟಾರ್ಗೆಟ್ ಅಂತಿರೋದು ನನಗೆ ಗೊತ್ತಿಲ್ಲ. 15 ಜನ ಸಸ್ಪೆಂಡ್ ಮಾಡಿದ್ದಾರೆ. ನನ್ನ ಪತ್ರದ ಆಧಾರದ ಮೇಲೆ ತನಿಖೆ ಆಗಿದ್ದರೆ 198 ವಾರ್ಡಿಗೂ ಅನ್ವಯ ಆಗುತ್ತಿತ್ತು ಎಂದು ತಿಳಿಸಿದರು.