ಬೆಂಗಳೂರು:ನೇಮಕಾತಿ, ವರ್ಗಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳಿಂದ ಹಣ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ತಿಳಿಸಿದ್ದಾರೆ. ಇದೇ ವೇಳೆ ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ಹಣ ನೀಡಿರುವ ಆರೋಪದ ಬಗೆಗೂ ಅವರು ಪ್ರತಿಕ್ರಿಯಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಇನ್ಸ್ಪೆೆಕ್ಟರ್ ನಂದೀಶ್ ಸಾವು ವಿಚಾರದಲ್ಲಿ ಎಂಟಿಬಿ ನಾಗರಾಜ್ ಅವರನ್ನು ಕರೆದು ತನಿಖೆ ನಡೆಸಲಿ. ಸಚಿವರು ಎಂದರೆ ಸರ್ಕಾರ. ಕಮಿಷನ್ ಸರ್ಕಾರ ಎನ್ನುವುದಕ್ಕೆ ಸರ್ಕಾರವೇ ಪ್ರೂಫ್ ಕೊಟ್ಟಂತಾಗಿದೆ. ಸಚಿವರೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಂತಾಗಿದೆ. ಜನರ ಮೇಲೆ ಇದು ರಿಫ್ಲೆಕ್ಟ್ ಆಗುತ್ತದೆ. ಎಂಟಿಬಿ ನಾಗರಾಜ್ ಹೇಳಿಕೆ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ವರ್ಗಾವಣೆಗೆ ಹಣ ಪಡೆಯುವುದು ಸರಿಯಾದ ಕ್ರಮವಲ್ಲ. ನಾನೂ ಕೂಡ ಗೃಹ ಸಚಿವನಾಗಿದ್ದೆ. ನಾನಿದ್ದಾಗ ಒಂದೇ ಒಂದು ಆರೋಪ ಬಂದಿರಲಿಲ್ಲ. ಹಣ ಪಡೆದು ವರ್ಗಾವಣೆ ಮಾಡಿರುವುದು ಅಕ್ಷಮ್ಯ ಅಪರಾಧ. ಮಾಧುಸ್ವಾಮಿ ಕೂಡ ಸರ್ಕಾರ ನಡೆಯುತ್ತಿಲ್ಲ ಎಂದು ಹೇಳಿದ್ದರು ಎಂದು ನೆನಪಿಸಿಕೊಂಡರು.
ಪೋಸ್ಟಿಂಗ್ಗೆ 70-80 ಲಕ್ಷ ಹಣ ಕೊಟ್ಟು ಬಂದರೆ ಹೃದಯಾಘಾತ ಆಗದೆ ಇನ್ನೇನಾಗುತ್ತೆ. ಪೋಸ್ಟಿಂಗ್ ಮತ್ತು ನೇಮಕಾತಿಗಾಗಿ ಲಕ್ಷಾಂತರ ದುಡ್ಡು ಕೊಡಬೇಕು. ದುಡ್ಡು ಕೊಟ್ಟ ಮೇಲೆ ಬರುವ ಸಂಬಳದಲ್ಲಿ ಆ ದುಡ್ಡು ಸರಿಮಾಡೋದಿಕ್ಕೆ ಆಗುತ್ತಾ..? ಇದೇ ಟೆನ್ಷನ್ನಲ್ಲಿ ಇನ್ಸ್ಪೆಕ್ಟರ್ ನಂದೀಶ್ ಇದ್ದರು ಕಾಣುತ್ತೆ. ನೇಮಕಾತಿ ಮತ್ತು ಟ್ರಾನ್ಸಫರ್ಗೆ ದುಡ್ಡು ತೆಗೆದುಕೊಳ್ಳುವುದು ಗಂಭೀರ ಆರೋಪ. 40% ಕಮಿಷನ್ ಸರ್ಕಾರ ಇದೆ ಎನ್ನುವುದು ಎಂಟಿಬಿ ಅವರ ಮಾತಿನಲ್ಲೇ ಗೊತ್ತಾಗುತ್ತದೆ ಎಂದರು.
ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ಹಣ ಹೋಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಇದೊಂದು ಕೆಟ್ಟ ಸಂಪ್ರದಾಯ. ದೀಪಾವಳಿ ಹಬ್ಬ ಇದೆ. ಹಬ್ಬಕ್ಕೆ ಸ್ವೀಟ್ ಬಾಕ್ಸ್ ಕೊಡಬೇಕು. ಆದರೆ ಆ ಸ್ವೀಟ್ ಬಾಕ್ಸ್ನಲ್ಲಿ ಹಣ ಹಾಕಿಕೊಡುವಾಗ ಅದು ಸಿಎಂ ಗಮನಕ್ಕೆ ಬಾರದೆ ಹೇಗೆ ನಡೆಯುತ್ತದೆ? ಸಿಎಂ ಗಮನಕ್ಕೆ ಬಾರದೆ ಆ ದುಡ್ಡು ಬರುತ್ತಾ? ಅಷ್ಟೊಂದು ದುಡ್ಡು ಎಲ್ಲಿಂದ ಬಂದಿದೆ..? ಯಾರ ದುಡ್ಡು ಅದು..? ಇದು ಪೇ-ಸಿಎಂ ತರಹ ಪೇ-ಪಿಎಂ ಆಗಿದೆ ಅಂದರೆ ಪೇ ಪರ್ಸನಲ್ ಮಿಡಿಯಾ ಆಗಿದೆ. ಯಾರ್ಯಾರಿಗೆ ದುಡ್ಡು ಹೋಗಿದೆ. ಯಾರು ಆ ದುಡ್ಡು ವಾಪಸ್ ಕೊಟ್ಟಿದ್ದಾರೆ ಎನ್ನುವುದು ಅವರೇ ಹೇಳಬೇಕು. ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದುಡ್ಡು ತಂದು ಕೊಡುತ್ತಾರೆ ಎಂದರೆ ಅದೇನು ಅವರ ದುಡ್ಡಾ? ಈ ದುಡ್ಡು ಎಲ್ಲಿಂದ ಬಂತು? ಸಿಎಂ ಗಮನಕ್ಕೆ ಬಾರದೆ ಈ ದುಡ್ಡು ಬಂದಿದೆಯಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಬೊಮ್ಮಾಯಿ ಅವರೇ, ಆ 'ಲಂಚ'ದ ಬಗ್ಗೆ ತಾವು ಜನತೆಗೆ ಉತ್ತರಿಸಬೇಕು: ಕಾಂಗ್ರೆಸ್