ಕರ್ನಾಟಕ

karnataka

ETV Bharat / state

ಐಟಿ ದಾಳಿಯಲ್ಲಿ ಸಿಕ್ಕ 42 ಕೋಟಿ ರೂಪಾಯಿ ಯಾರದ್ದು- ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ - ಕೋಟಾ ಶ್ರೀನಿವಾಸ ಪೂಜಾರಿ

ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯಲ್ಲಿ ಸಿಕ್ಕ ಹಣದ ಮೂಲ ತಿಳಿಸುವಂತೆ ಸಿ.ಟಿ.ರವಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ
ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ

By ETV Bharat Karnataka Team

Published : Oct 13, 2023, 7:07 PM IST

ಬೆಂಗಳೂರು :ಕಾಂಗ್ರೆಸ್​ ಪಕ್ಷದ ಮಾಜಿ ಕಾರ್ಪೊರೇಟರ್ ದಂಪತಿಯ ಮನೆಯಲ್ಲಿ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ವಶಪಡಿಸಿಕೊಂಡ 42 ಕೋಟಿ ರೂಪಾಯಿ ನಗದು ಯಾರಿಗೆ ಸೇರಿದ್ದು ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.

ಹಿಂದಿನ ಬಿಜೆಪಿ ಸರಕಾರದ ಮೇಲೆ 40% ಕಮೀಷನ್ ಸರಕಾರ ಎಂದು ಸುಳ್ಳು ಆರೋಪ ಮಾಡಿದ, ಕಾಂಗ್ರೆಸ್ಸಿನ ಹಿರಿಯ ನಾಯಕರ ಆಪ್ತ, ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಹಾಗೂ ಆತನ ಪತ್ನಿ ಕಾಂಗ್ರೆಸ್ಸಿನ ಮಾಜಿ ಕಾರ್ಪೊರೇಟರ್ ದಂಪತಿಯ ಮನೆಯಲ್ಲಿ ಐಟಿ ಅಧಿಕಾರಿಗಳು ವಶಪಡಿಸಿಕೊಂಡ 42 ಕೋಟಿ ರೂಪಾಯಿ ನಗದು ಯಾರಿಗೆ ಸೇರಿದ್ದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರೇ ಎಂದು ಪ್ರಶ್ನಿಸುವ ಮೂಲಕ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೊನ್ನೆ ಪಾಲಿಕೆಯಲ್ಲಿ ₹600 ಕೋಟಿ ಬಾಕಿ ಹಣ ಬಿಡುಗಡೆಯಾಗಿತ್ತು. ಇದು ಅದರ ಕಮಿಷನ್ ಹಣದ ಬಾಬ್ತು ಎಂದು ಅನೇಕ ಗುತ್ತಿಗೆದಾರರು ಹೇಳುತ್ತಿದ್ದಾರೆ ನಿಜವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ? ಪಂಚ ರಾಜ್ಯಗಳ ಚುನಾವಣಾ ಸಂದರ್ಭದಲ್ಲಿ ಯಾವ ಯಾವ ರಾಜ್ಯದ ಚುನಾವಣೆಗೆ ನಮ್ಮ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದೀರಿ ಕಾಂಗ್ರೆಸ್ಸಿಗರೇ? ಗ್ಯಾರಂಟಿ ಎಂಬ ಸುಳ್ಳು ಆಮಿಷ ಒಡ್ಡಿ ಅಧಿಕಾರಕ್ಕೆ ಬಂದ ನೀವು ರಾಜ್ಯವನ್ನು ಇನ್ನೆಷ್ಟು ಲೂಟಿ ಮಾಡಲು ಯೋಜನೆ ಹಾಕಿಕೊಂಡಿದ್ದೀರಿ? ಎಂದು ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಭ್ರಷ್ಟಾಚಾರವೆಸಗಿ ಐಟಿ ರೈಡ್‌ಗೊಳಗಾಗಿರುವ ಅಂಬಿಕಾಪತಿಗೂ, ಸಿಎಂ ಸಿದ್ದರಾಮಯ್ಯ ಅವರಿಗೂ ಏನು ಸಂಬಂಧ? ಅಂಬಿಕಾಪತಿ ಮನೆಯಲ್ಲಿ ಸೀಜ್ ಆದ ಕಳ್ಳ ದುಡ್ಡಿನಲ್ಲಿ, ಸಿಎಂ ಸಿದ್ದರಾಮಯ್ಯರವರ ಪಾಲೆಷ್ಟು? ದೆಹಲಿಯ ಕಲೆಕ್ಷನ್ ಏಜೆಂಟ್ ಸುರ್ಜೆವಾಲಾರವರಿಗೆ ತಲುಪಬೇಕಾಗಿದ್ದ ಪಾಲೆಷ್ಟು? ಉತ್ತರಿಸಿ ರಾಜ್ಯ ಕಾಂಗ್ರೆಸ್ ನಾಯಕರೇ ಎಂದು ಬಿಜೆಪಿ ಎಕ್ಸ್ ಮೂಲಕ ಆಗ್ರಹಿಸಿದೆ.

ಗ್ಯಾರಂಟಿಗಳ ಹೆಸರಲ್ಲಿ ರಾಜ್ಯದ ಬೊಕ್ಕಸವನ್ನು ಲೂಟಿ ಹೊಡೆದು ಖಾಲಿ ಮಾಡಿರುವ ಎಟಿಎಂ ಸರ್ಕಾರ ಜನರಿಗೆ ಗ್ಯಾರಂಟಿಗಳನ್ನೂ ನೀಡದೆ ವಂಚಿಸಿ ಅಭಿವೃದ್ಧಿಗೂ ಕೊಕ್ಕೆ ಹಾಕಿದೆ. ಯಾವುದೇ ಹೊಸ ನೀರಾವರಿ ಕಾಮಗಾರಿ ಕೈಗೊಳ್ಳದಂತೆ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಆಜ್ಞೆ ಮಾಡಿದ್ದಾರೆ. ಈಗಾಗಲೇ ಬಾಕಿ ಬಿಲ್ ಕೊಡಲು ಹೆಣಗಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಕೇವಲ ನಾಲ್ಕೇ ತಿಂಗಳಿಗೆ ಪಂಜಾಬ್ ಸರ್ಕಾರದಂತೆ ದಿವಾಳಿ ಆಗುತ್ತಿರುವುದನ್ನು ಒಪ್ಪಿಕೊಂಡು ಶೂನ್ಯ ಅಭಿವೃದ್ಧಿ ಮಾದರಿಯಲ್ಲಿ ಆಡಳಿತ ನಡೆಸುತ್ತಿರುವುದು ಕನ್ನಡಿಗರ ದೌರ್ಭಾಗ್ಯ ಎಂದು ಬಿಜೆಪಿ ಟೀಕಿಸಿದೆ.

ಬಡವರ ಉಪವಾಸ ನೀಗಿಸುತ್ತೇನೆ ಎಂದು ಬಡಾಯಿ ಕೊಚ್ಚಿಕೊಂಡು, ಸಾವಿರಾರು ಕೋಟಿ ಖರ್ಚು ಮಾಡಿ ಭ್ರಷ್ಟಾಚಾರಕ್ಕೂ ಹೆಸರು ಮಾಡಿದ್ದ ಇಂದಿರಾ ಕ್ಯಾಂಟೀನ್ ಮೇಲೆ ಸಿದ್ದರಾಮಯ್ಯ ಅವರಿಗೆ ಈಗ ಒಲವು ಕಡಿಮೆಯಾಗಿದೆ. ಯಾವುದೇ ಯೋಜನೆಯ ಮೇಲೆ ರಾಜ್ಯ ಕಾಂಗ್ರೆಸ್​ಗೆ ಆಸಕ್ತಿ ಇರುವುದು ಅದರ ಪ್ರಚಾರದ ಅವಧಿಯಲ್ಲಿ ಮಾತ್ರ. ಈಗಾಗಲೇ 23 ಇಂದಿರಾ ಕ್ಯಾಂಟೀನ್, 11 ಅಡುಗೆ ಮನೆ ಸಂಪೂರ್ಣ ಬಂದ್ ಆಗಿದ್ದು, ಮೂರು ನಾಲ್ಕು ತಿಂಗಳಲ್ಲಿ ಉಳಿದ ಇಂದಿರಾ ಕ್ಯಾಂಟೀನ್​ಗಳಿಗೆ ಕಾಂಗ್ರೆಸ್‌ ಸರ್ಕಾರವೇ ಬೀಗ ಜಡಿದು ಬಡ ಜನತೆಗೆ ಮತ್ತೊಂದು ಹೊಡೆತ ನೀಡಲಿರುವುದು ಮಾತ್ರ ದುರಾದೃಷ್ಟ ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಐಟಿ ರೇಡ್ ಮಾಡುವುದು ಸಂಪ್ರದಾಯ. ವ್ಯಕ್ತಿಯೊಬ್ಬನ ಮನೆಯ ಮೇಲೆ ದಾಳಿ ಮಾಡಿದ್ದಾಗ 42 ಕೋಟಿ ರೂ. ನಗದು ಹಣ ಸಿಕ್ಕಿದೆ. ಈ 42 ಕೋಟಿ ನಗದು ಹಣವನ್ನು ಯಾವುದಕ್ಕೆ ಸಂಗ್ರಹ ಮಾಡಲಾಗಿತ್ತು? ಯಾರಿಗೆ ಕಳುಹಿಸುವುದಕ್ಕೆ ಸಂಗ್ರಹ ಮಾಡಲಾಗಿತ್ತು? ಯಾರ ಮೂಲಕ ಸಂಗ್ರಹ ಮಾಡಲಾಗಿತ್ತು? ಎನ್ನುವುದು ಪ್ರಶ್ನೆಯಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ಕೊಡಬೇಕಾಗುತ್ತದೆ. ಪಂಚರಾಜ್ಯ ಚುನಾವಣೆಗೂ ಇಲ್ಲಿ‌ ಸಂಗ್ರಹವಾದ ಹಣಕ್ಕೂ ಯಾವ ನಂಟು ಇದೆ ಅಂತ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಪಂಚ ರಾಜ್ಯಗಳ ಚುನಾವಣೆಗೆ ಕರ್ನಾಟಕ ಸಮೃದ್ಧ ಎಟಿಎಂ: ಹೆಚ್​.ಡಿ.ಕುಮಾರಸ್ವಾಮಿ ಲೇವಡಿ

ABOUT THE AUTHOR

...view details