ಬೆಂಗಳೂರು :ಮಲ್ಲೇಶ್ವರಂನಲ್ಲಿ ವೈಜ್ಞಾನಿಕವಾಗಿ ವೈಟ್ ಟ್ಯಾಪಿಂಗ್ ಮಾಡಿ ಅಭಿವೃದ್ಧಿಪಡಿಸಿರುವ ಸಂಪಿಗೆ ರಸ್ತೆಯನ್ನು ಕ್ಷೇತ್ರದ ಶಾಸಕ ಮತ್ತು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಭಾನುವಾರ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದರು.
ಮಲ್ಲೇಶ್ವರ ವೃತ್ತದಲ್ಲಿರುವ ರಾಷ್ಟ್ರಕವಿ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಚಿವರು ಯಶವಂತಪುರ ವೃತ್ತದವರೆಗೆ ಒಂದು ಸಾವಿರಕ್ಕೂ ಹೆಚ್ಚು ಉತ್ಸಾಹಿಗಳ ಬೈಕ್ ಜಾಥದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಸ್ವತಃ ಸಚಿವರು ಎಲೆಕ್ಟ್ರಿಕ್ ಸ್ಕೂಟರ್ ಚಲಾಯಿಸಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ್ವತ್ಥನಾರಾಯಣ ಒಟ್ಟು 7.5 ಕಿ.ಮೀ. ಉದ್ದದ ಈ ದ್ವಿಪಥ ರಸ್ತೆಯನ್ನು ಉತ್ಕೃಷ್ಟ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಇಡೀ ಬೆಂಗಳೂರಿಗೇ ಮಾದರಿಯಾಗಿದೆ ಎಂದರು.
ಒಂದೆಡೆ ಕಾಂಗ್ರೆಸ್ ಅವಧಿಯಲ್ಲಿ ಆರಂಭಗೊಂಡಿದ್ದ ವೈಟ್ ಟ್ಯಾಪಿಂಗ್ ಕಾಮಗಾರಿಯಲ್ಲಿ ಆಕ್ರಮ ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಿ ಸರ್ಕಾರ ತನಿಖೆಗೆ ಒಪ್ಪಿಸಿತ್ತು. ಇದರ ಪರಿಣಾಮ ನಗರದಲ್ಲಿ ಅರ್ಧಕ್ಕೆ ಕಾಮಗಾರಿ ಸ್ಥಗಿತಕೊಂಡು ಸಾರ್ವಜನಿಕರು ಪರದಾಡುವಂತಾಗಿತ್ತು. ಕಳೆದ ಎರಡು ವರ್ಷದಿಂದ ಇದೆ ರೀತಿ ನೆನೆಗುದಿಗೆ ಬಿದ್ದಿದ ವೈಟ್ ಟ್ಯಾಪಿಂಗ್ ಕಾಮಗಾರಿಗೆ ಮತ್ತೆ ಚಾಲನೆ ಸಿಕ್ಕಿತ್ತು. ಇದೀಗ ಚುನಾವಣೆ ಹತ್ತಿರವಾಗತ್ತಿದ್ದಂತೆ ವೈಟ್ ಟ್ಯಾಪಿಂಗ್ ಕಾಮಗಾರಿಯನ್ನು ಸರ್ಕಾರ ವೇಗವಾಗಿ ಪೂರ್ಣಗೊಳಿಸುತ್ತಿದೆ.
ಪಾದಚಾರಿ ಮಾರ್ಗ ಅಭಿವೃದ್ಧಿ :ಫೀಡರ್ ಲೈನ್, ನೀರು ಪೂರೈಕೆ ಕೊಳವೆ, ಒಳಚರಂಡಿ ಮಾರ್ಗ, ವಿದ್ಯುತ್ ಕೇಬಲ್ ಎಲ್ಲವನ್ನೂ ಈಗ ನೆಲದ ಆಡಿಯಲ್ಲಿ ಅಳವಡಿಸಲಾಗಿದೆ. ಹಾಗೆಯೇ ಪಾದಚಾರಿ ಮಾರ್ಗವನ್ನೂ ಅಭಿವೃದ್ಧಿ ಪಡಿಸಲಾಗಿದೆ ಎಂದು ತಿಳಿಸಿದರು.